ಹನಗೋಡು: ಆನೆಚೌಕೂರು ಬಳಿಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಸಾಕಾನೆ ಶಿಬಿರದ ಮೇಲ್ವಿಚಾರಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹುಣಸೂರು ತಾಲೂಕಿನ ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರದ ನಿವಾಸಿಯಾದ ಸಾಕಾನೆ ಶಿಬಿರದ ಮೇಲ್ವಿಚಾರಕ ಜೆ.ಕೆ.ತಿಮ್ಮ (48) ಮೃತರು.
ಜೆ.ಕೆ.ತಿಮ್ಮ ಅವರು ಸಾಕಾನೆ ಶಿಬಿರದಿಂದ ಕರ್ತವ್ಯ ಮುಗಿಸಿ ಕವಾಡಿ ಮಂಜುನೊಂದಿಗೆ ಸ್ವಗ್ರಾಮಕ್ಕೆ ಬರುತ್ತಿದ್ದರು. ಈ ವೇಳೆ ಹುಣಸೂರು ಕಡೆಯಿಂದ ಗೋಣಿಕೊಪ್ಪ ಕಡೆಗೆ ಹೋಗುತ್ತಿದ್ದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ದಾರಿಹೋಕರು ಚೆಕ್‌ಪೋಸ್ಟ್ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದರು. ಸಿಬ್ಬಂದಿ ಸ್ಥಳಕ್ಕೆ ತೆರಳುವಷ್ಟರಲ್ಲಿ ಮೃತಪಟ್ಟಿದ್ದಾರೆ. ಸಿಸಿಎಫ್ ಹೀರಾಲಾಲ್, ಹುಲಿಯೋನೆ ಕ್ಷೇತ್ರ ನಿರ್ದೇಶಕ ಮಹೇಶ್ ಕುಮಾರ್ ಭೇಟಿ ನೀಡಿ, ಸ್ಥಳ ಪರಿಶೀಲಿಸಿದರು.
ಮೃತ ಜೆ.ಕೆ.ತಿಮ್ಮ ಅವರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ. ಶುಕ್ರವಾರ ಸಂಜೆ ಸ್ವಗ್ರಾಮ ಶೆಟ್ಟಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.