ಚೆನ್ನೈ: ಭಾರತ ಚಿತ್ರರಂಗದ ಸೂಪರ್ಸ್ಟಾರ್ ರಜಿನಿಕಾಂತ್ (SuperStar Rajinikanth) ಸೋಮವಾರ (ಸೆಪ್ಟೆಂಬರ್ 30) ತಡರಾತ್ರಿ ದಿಢೀರ್ ಎಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಜಿನಿಕಾಂತ್ ಅವರ ಆರೋಗ್ಯ ಸ್ಥಿರವಾಗಿದ್ದು, ಮಂಗಳವಾರ (ಅಕ್ಟೋಬರ್ 01) ಹೃದ್ರೋಗ ತಜ್ಞರು ಅವರನ್ನು ಪರಿಶೀಲಿಸಲಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ವೇಳೆ ಹಠಾತ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದೆ ಎಂದು ವರದಿಯಾಗಿದೆ.
ರಜಿನಿಕಾಂತ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವ ಕಾರಣ ಹೃದ್ರೋಗ ತಜ್ಞರ ಅಪಾಯಿಂಟ್ಮೆಂಟ್ ಇದ್ದು, ಇಂದು (ಅಕ್ಟೋಬರ್ 1) ಬೆಳಗ್ಗೆ ಪ್ರಮುಖ ಪರೀಕ್ಷೆಗೆ ಒಳಗಾಗಲಿದ್ದಾರೆ. ವೈದ್ಯಕೀಯ ಪರೀಕ್ಷೆ ಮುಗಿಸಿ ಶೀಘ್ರದಲ್ಲೇ ಮನೆಗೆ ಮರಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ರಜಿನಿಕಾಂತ್ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹಬ್ಬುತ್ತಿದ್ದಂತೆ ಅಭಿಮಾನಿಗಳು ದೇವರ ಮೊರೆ ಹೋಗಿದ್ದು, ನೆಚ್ಚಿನ ನಟ ಶೀಘ್ರ ಗುಣಮುಖರಾಗಿ ಹೊರಬರಲೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.