ನ್ಯೂಸ್

ಎಲ್ಲೆಲ್ಲೂ 'ಸೂಪರ್​ಸ್ಟಾರ್​ ರಜನಿ' ಹವಾ; ರಿಲೀಸ್‌ಗೂ ಮುನ್ನ 'ಕೂಲಿ' ಕೈಸೇರಿದ 250 ಕೋಟಿ| coolie

Coolie Release: ತಮಿಳು ಚಿತ್ರರಂಗದ ಸೂಪರ್​ಸ್ಟಾರ್, ಅಭಿಮಾನಿಗಳ ನೆಚ್ಚಿನ ‘ತಲೈವಾ’​ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕೂಲಿ’ ಚಿತ್ರದ ಕ್ರೇಜ್​ ಇದೀಗ ದುಪ್ಪಟ್ಟಾಗಿದೆ. ಇದೇ ಆ.14ರಂದು ತೆರೆ ಕಾಣಲಿರುವ ಸಿನಿಮಾಗೆ ಮುಂಗಡ ಬುಕ್ಕಿಂಗ್​ಗಳು ಬಲು ಜೋರಾಗಿದ್ದು, ಜಾಗತಿಕವಾಗಿ ರಿಲೀಸ್ ಆಗಲಿರುವ ರಜನಿ ಬಾಕ್ಸ್​ಆಫೀಸ್‌ನಲ್ಲಿ ಮೊದಲ ದಿನವೇ 100 ಕೋಟಿ ಗಳಿಕೆ ಕಾಣುತ್ತದೆ ಎನ್ನುವ ಬಗ್ಗೆ ಚರ್ಚೆ ಆಗುತ್ತಿದೆ. ಈ ನಡುವೆ ರಿಲೀಸ್‌ಗೂ ಮುನ್ನ 'ಕೂಲಿ' ಭರ್ಜರಿ ಗಳಿಕೆ ಕಂಡಿದೆ ಎನ್ನುವ ಬಗ್ಗೆ ವರದಿಯಾಗಿದೆ.

ಕೂಲಿ ಸಿನಿಮಾವನ್ನು 375 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದ್ದು, ನಿರ್ಮಾಪಕರು ಈಗಾಗಲೇ ಚಿತ್ರದ ಡಿಜಿಟಲ್, ಸಂಗೀತ ಮತ್ತು ಸ್ಯಾಟ್‌ಲೈಡ್ ಹಕ್ಕುಗಳ ಮಾರಾಟದಿಂದ 250 ಕೋಟಿ ರೂಪಾಯಿ ಗಳಿಸಿದ್ದಾರೆ ಎಂಬ ವರದಿಯಾಗಿದೆ. ಈ ಚಿತ್ರದ ಅಂತರರಾಷ್ಟ್ರೀಯ ಹಕ್ಕುಗಳು 68 ಕೋಟಿ ರೂ.ಗಳಿಗೆ ಮಾರಾಟವಾಗಿವೆ ಎನ್ನಲಾಗಿದೆ. ಜೊತೆಗೆ, ಕೂಲಿ ಸಿನಿಮಾ ವಿದೇಶಗಳಲ್ಲಿ ಮುಂಗಡ ಬುಕಿಂಗ್‌ನೊಂದಿಗೆ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ 30 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದೆ.

ಕೇರಳದಲ್ಲಿ ಕೂಲಿ ಟಿಕೆಟ್ಸ್​ಗಾಗಿ ತಳ್ಳಾಟ

ಅಭಿಮಾನಿಗಳು ಟಿಕೆಟ್ ಕಿಟಕಿಗಳ ಮುಂದೆ ಗುಂಪುಗುಂಪಾಗಿ ನಿಂತು ಮುಂಗಡ ಟಿಕೆಟ್‌ಗಳನ್ನು ಪಡೆಯಲು ಪರಸ್ಪರ ತಳ್ಳಾಟ ನಡೆಸಿದ್ದಾರೆ. ಈ ಬಗ್ಗೆ ನಿರ್ಮಾಪಕರು ಸ್ವತಃ ಹಂಚಿಕೊಂಡಿರುವ ವೀಡಿಯೊದಲ್ಲಿ, ತ್ರಿಶೂರ್‌ನ ಥಿಯೇಟರ್‌ನ ಹೊರಗೆ ನೂರಾರು ಅಭಿಮಾನಿಗಳು ಜಮಾಯಿಸಿ, ಗಾರ್ಡ್‌ಗಳು ಗೇಟ್‌ಗಳನ್ನು ತೆರೆಯಲು ಕಾಯುತ್ತಿರುವುದನ್ನು ನೋಡಬಹುದಾಗಿದೆ.

ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ಅಮೀರ್ ಖಾನ್, ನಾಗಾರ್ಜುನ, ಸತ್ಯರಾಜ್, ಶ್ರುತಿ ಹಾಸನ್, ಸೌಬಿನ್ ಶಾಹಿರ್ ಮತ್ತು ಉಪೇಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ರಜನಿಕಾಂತ್ ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದೆ. ಆಗಸ್ಟ್ 14, 2025 ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಈಗಾಗಲೇ ಈ ಸಂಭ್ರಮ ಭರದಿಂದ ಸಾಗಿದೆ. ಈಗ ವೈರಲ್ ಆಗಿರುವ ಅಪರೂಪದ ಘಟನೆಯೊಂದರಲ್ಲಿ, ಯುನೊ ಅಕ್ವಾ ಕೇರ್ ಎಂಬ ಸಂಸ್ಥೆಯು ಚಿತ್ರ ಬಿಡುಗಡೆಯಾದ ದಿನದಂದು ತನ್ನ ಉದ್ಯೋಗಿಗಳಿಗೆ ಅಧಿಕೃತವಾಗಿ ರಜೆ ಘೋಷಿಸಿದೆ.

(ಏಜೆನ್ಸೀಸ್)