ನ್ಯೂಸ್

ಹೊಂಗಸಂದ್ರದ ಡೆಲಿವರಿ ಹುಡುಗ ಕರೊನಾ ಸೂಪರ್‌ಸ್ಪ್ರೆಡರ್ ಆಗುವ ಆತಂಕ

ಬೆಂಗಳೂರು: ನಗರದ ಡೆಲಿವರಿ ಹುಡಗನಿಗೆ ಕರೊನಾ ವೈರಸ್​ ಸೋಂಕು ತಗುಲಿದ್ದು ಆತ ಸೂಪರ್‌ಸ್ಪ್ರೆಡರ್ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಬುಧವಾರ ನಗರದಲ್ಲಿ ಪತ್ತೆಯಾದ ಇಬ್ಬರು ಸೋಂಕಿತರಲ್ಲಿ ಓರ್ವ 25 ವರ್ಷದ ಮಂಗಮ್ಮನಪಾಳ್ಯದ ಡೆಲಿವರಿ ಬಾಯ್​ ಆಗಿದ್ದು ಈತ ಹೆಚ್ಚು ಮಂದಿಗೆ ಸೋಂಕು ಹರಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ಹುಡುಗ ಸೋಂಕಿನ ಮೂಲ ಆತನ ತಂದೆಯಾಗಿದ್ದಾರೆ. ಇವರು ಹೊಂಗಸಂದ್ರ ಕ್ಲಸ್ಟರ್​ನಲ್ಲಿದ್ದ ಸೋಂಕಿತನ ಜತೆ ಸಂಪರ್ಕ ಹೊಂದಿದ್ದರು. ಹೀಗಾಗಿ ಅವರ ಕುಟುಂಬದ ಮೂವರಿಗೆ ಸೋಂಕು ತಗುಲಿದೆ.

ಡೆಲಿವರಿ ಹುಡುಗ ಭೇಟಿ ನೀಡಿದ ಸ್ಥಳ ಹಾಗೂ ಆತ ಭೇಟಿ ನೀಡಿದ ಮನೆಗಳ ಪಟ್ಟಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ತಯಾರಿಸುತ್ತಿದ್ದಾರೆ. ಈ ಹುಡುಗನ ಬಗ್ಗೆ ಮಾಹಿತಿ ನೀಡಿ ಆತನ ಸಂಪರ್ಕಕ್ಕೆ ಬಂದವರು ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೋರಿದ್ದಾರೆ.

ರಾಜ್ಯದಲ್ಲಿ ಮತ್ತೊಂದು ಆತಂಕದ ವಿಚಾರ ಎಂದರೆ ಬಾದಾಮಿಯ ಗರ್ಭಿಣಿ ಮಹಿಳೆಗೆ ಸೋಂಕು ತಗುಲಿದ್ದು, 12 ಮಂದಿಗೆ ಸೋಂಕು ಹರಡಿದ್ದಾರೆ.