Super intelligence 
ನ್ಯೂಸ್

ಸೂಪರ್​ ಇಂಟೆಲಿಜೆನ್ಸ್​ ಸರ್ವನಾಶಕ್ಕೆ ನಾಂದಿ: ಆಂಥ್ರೊಪಿಕ್​ನ ಜೇಕಬ್​ ಕಾಕ್ಸನ್​ ರಾಜೀನಾಮೆ ತೆರೆದಿಟ್ಟ ಆತಂಕಗಳು

"ಓಪನ್​ಎಐ ಸೇರಿದಂತೆ ಜಾಗತಿಕ ಮಟ್ಟದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಸೂಪರ್​ ಇಂಟೆಲಿಜೆನ್ಸ್​ಅನ್ನು ಅಭಿವೃದ್ಧಿಪಡಿಸುವ ಪೈಪೋಟಿಯಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ; ಈ ಪೈಪೋಟಿ ಮನುಕುಲವನ್ನೇ ಪಣಕ್ಕಿಡುವಂತಿದೆ' ಎಂದು ಆರೋಪಿಸಿ ಆಂಥ್ರೊಪಿಕ್​ನ ಕೃತಕ ಬುದ್ಧಿಮತ್ತೆ ಸಂಶೋಧಕ ಜೇಕಬ್​ ಕಾಕ್ಸನ್​ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯು ಭವಿಷ್ಯದಲ್ಲಿ "ಎಐ' ತಂದೊಡ್ಡಬಹುದಾದ ಅಪಾಯಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ಕಾಕ್ಸನ್​ ಹೇಳಿದ್ದೇನು? ಆತ ಹೇಳುತ್ತಿರುವುದು ನಿಜವೇ? ಮನುಕುಲಕ್ಕೆ ಈ ತಂತ್ರಜ್ಞಾನ ಹೇಗೆ ಕಂಟಕವಾಗುತ್ತದೆ? ಈ ಬಗ್ಗೆ ತಜ್ಞರು ಹೇಳುವುದೇನು? ಕಂಪನಿಗಳ ಸಮಜಾಯಿಷಿ ಏನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಂಥ್ರೊಪಿಕ್​ ಮತ್ತು ಒಪನ್​ಎಐ ಈ ಎರಡೂ ಅಗ್ರಗಣ್ಯ ಎಐ ಸಂಸ್ಥೆಗಳಲ್ಲಿ ಸುಮಾರು ಮೂರು ವರ್ಷಗಳ ಕಾಲ "ಪ್ರೀ&ಟ್ರೇನಿಂಗ್​' ಸಂಶೋಧಕರಾಗಿ ಕೆಲಸ ಮಾಡಿದವರು ಜೇಕಬ್​ ಕಾಕ್ಸನ್​. ಅವರೇ ಈಗ ಎಐ ತಂತ್ರಜ್ಞಾನದ ತೀವ್ರಗತಿಯ ಬೆಳವಣಿಗೆಯ ಕುರಿತು ಬಹಿರಂಗವಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಅವರು ಹಲವಾರು ಕಾರಣಗಳನ್ನು ನೀಡಿದ್ದಾರೆ. ಆ ಪೈಕಿ ಪ್ರಮುಖವಾದ ಮೂರು ಕಾರಣಗಳು ಇಂತಿವೆ.
ಸ್ವಯಂ ಸುಧಾರಣೆಗೊಳ್ಳುವ ಸೂಪರ್​ ಇಂಟೆಲಿಜೆನ್ಸ್​: ಕಾಕ್ಸನ್​ ಅವರ ಪ್ರಕಾರ, ಮಾನವನ ನಿಯಂತ್ರಣಕ್ಕೂ ಸಿಗದಂತೆ ತಾನೇ ಸ್ವತಃ ತರಬೇತಿ ಪಡೆದು ಬೆಳೆಯಬಲ್ಲ "ಸೂಪರ್​ ಇಂಟೆಲಿಜೆನ್ಸ್​' ತಂತ್ರಜ್ಞಾನದ ಕಡೆಗೆ ಕಂಪನಿಗಳು ವಿವೇಚನಾರಹಿತವಾಗಿ ಆತುರದಿಂದ ಧಾವಿಸುತ್ತಿವೆ.
ಸತ್ಯವನ್ನು ಮುಚ್ಚಿಡುತ್ತಿರುವ ತಜ್ಞರು: ಎಐ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಹಿರಿಯ ಸಂಶೋಧಕರು ಮಾಧ್ಯಮಗಳ ಮುಂದೆ ಮಾತಾಡುವಾಗ "ಎಲ್ಲವೂ ಸುರಕ್ಷಿತವಾಗಿದೆ' ಎಂದು ಲಘುವಾಗಿ ಹೇಳುತ್ತಾರಾದರೂ, ಆಂತರಿಕವಾಗಿ ಅವರಿಗೆ ಈ ತಂತ್ರಜ್ಞಾನದಿಂದ ಆಗಬಹುದಾದ ವಿನಾಶದ ಅರಿವಿದೆ ಎಂದು ಕಾಕ್ಸನ್​ ಬಹಿರಂಗಪಡಿಸಿದ್ದಾರೆ. ಈ ದಶಕದ ಅಂತ್ಯದ ವೇಳೆಗೆ, ಅಂದರೆ 2030ರೊಳಗೆ, ಈ ತಂತ್ರಜ್ಞಾನವು ಮಾನವಕುಲಕ್ಕೆ ಕಂಟಕವಾಗಬಹುದೆಂದು ಸ್ವತಃ ಎಐ ರೂಪಿಸಿದವರೇ ಆತಂಕಗೊಂಡಿದ್ದಾರೆ ಎಂಬುದು ಕಾಕ್ಸನ್​ ಅವರ ಆರೋಪ.
ಅಪಾಯಕಾರಿ ಹೆಜ್ಜೆ: ಆಂಥ್ರೊಪಿಕ್​ ಸಂಸ್ಥೆಗೆ ಅಪಾಯದ ಅರಿವಿದ್ದರೂ, "ನಾವು ಮಾಡದಿದ್ದರೆ ಬೇರೆಯವರು ಮಾಡಿಬಿಡುತ್ತಾರೆ' ಎಂಬ ಸ್ಪರ್ಧಾತ್ಮಕ ಆತಂಕದಿಂದಾಗಿ ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರಿ ಮುಂದೆ ಸಾಗುತ್ತಿದೆ.

ಕಾಕ್ಸನ್​ ಹೇಳುತ್ತಿರುವುದು ನಿಜವೇ?

ಕಾಕ್ಸನ್​ ಅವರ ಆರೋಪಗಳು ಕೇವಲ ಊಹಾಪೋಹಗಳಲ್ಲ ಎಂಬುದಕ್ಕೆ ಎಐ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳೇ ಸಾಕ್ಷಿ. ಆಂಥ್ರೊಪಿಕ್​ನ ನಿಯಂತ್ರಣ ಮತ್ತು ಸುರಕ್ಷತಾ ತಂಡದ (ಅಲೈನ್​ಮೆಂಟ್​ ಟೀಮ್​) ಮುಖ್ಯಸ್ಥ ಎವಾನ್​ ಹ್ಯೂಬಂಗರ್​ ಮತ್ತಿತರ ಹಿರಿಯ ವಿಜ್ಞಾನಿಗಳು ಸಹ ಕಾಕ್ಸನ್​ ಅವರ ನಿಲುವನ್ನು ಬೆಂಬಲಿಸಿದ್ದಾರೆ. ಸೂಪರ್​ ಇಂಟೆಲಿಜೆಂಟ್​ ಸಿಸ್ಟಮ್​ಗಳು ಸ್ವತಃ ಕೋಡಿಂಗ್​ ಮಾಡುವ, ಹ್ಯಾಕಿಂಗ್​ ಮಾಡುವ ಮತ್ತು ಕಂಪ್ಯೂಟರ್​ ನೆಟ್​ವರ್ಕ್​ಗಳಲ್ಲಿ ತಮ್ಮದೇ ಆದ ಸಂಪನ್ಮೂಲಗಳನ್ನು ಗಳಿಸಿಕೊಳ್ಳುವ ಮಟ್ಟಕ್ಕೆ ಬೆಳೆಯುತ್ತಿವೆ. ಇದು ಸಂಪೂರ್ಣವಾಗಿ ಮನುಷ್ಯರ ನಿಯಂತ್ರಣ ಮೀರಿ ಬೆಳೆಯುವತ್ತ ಮುನ್ನುಗುತ್ತಿದೆ. ಇದಕ್ಕೆ ತಂತ್ರಜ್ಞಾನದ ಭಾಷೆಯಲ್ಲಿ "ಅಲೈನ್​ಮೆಂಟ್​ ಸಮಸ್ಯೆ' ಎನ್ನುತ್ತಾರೆ.

ಮನುಕುಲಕ್ಕೆ ಕಂಟಕವಾಗೋದು ಹೇಗೆ?

ಸೂಪರ್​ ಇಂಟೆಲಿಜೆನ್ಸ್​ ತಂತ್ರಜ್ಞಾನದ ಮೇಲೆ ಮನುಷ್ಯನ ನಿಯಂತ್ರಣ ತಪ್ಪಿದರೆ ಉಂಟಾಗಬಹುದಾದ ಪ್ರಮುಖ ಅಪಾಯಗಳು ಇಂತಿವೆ.
ಸೈಬರ್​ ದಾಳಿ ಮತ್ತು ಹ್ಯಾಕಿಂಗ್​: ಸೂಪರ್​ ಇಂಟೆಲಿಜೆನ್ಸ್​ ತಂತ್ರಜ್ಞಾನವು ಯಾವುದೇ ದೇಶದ ಅಥವಾ ಸಂಸ್ಥೆಯ ಪ್ರಮುಖ ಸೈಬರ್​ ವ್ಯವಸ್ಥೆಗಳು, ಬ್ಯಾಂಕಿಂಗ್​ ಜಾಲಗಳು ಮತ್ತು ರಕ್ಷಣಾ ವ್ಯವಸ್ಥೆಯನ್ನು ನಿಮಿಷಾರ್ಧದಲ್ಲಿ ಹ್ಯಾಕ್​ ಮಾಡುವ ಸಾಮರ್ಥ್ಯ ಗಳಿಸಬಹುದು.
ಮನುಷ್ಯನ ನಿಯಂತ್ರಣ ತಪ್ಪುವ ಅಪಾಯ: ಸೂಪರ್​ ಇಂಟೆಲಿಜೆನ್ಸ್​ ತಂತ್ರಜ್ಞಾನವು ಸ್ವಯಂ&ಸುಧಾರಣೆಗೊಳ್ಳಲು (ಸೆಲ್ಫ್​ ಇಂಪ್ರೂವಿಂಗ್​) ಪ್ರಾರಂಭಿಸಿದರೆ, ಮಾನವರು ಅದನ್ನು ನಿಲ್ಲಿಸಲು ಅಥವಾ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.
ಡಿಜಿಟಲ್​ ಜಗತ್ತಿನಲ್ಲಿ ಸ್ವಯಂ ಆಡಳಿತ!: ಈ ಕೃತಕ ಬುದ್ಧಿಮತ್ತೆಯ ವ್ಯವಸ್ಥೆಗಳು ಸ್ವತಃ ಹಣಕಾಸು, ಸಂಪನ್ಮೂಲ ಮತ್ತು ಡಿಜಿಟಲ್​ ಅಧಿಕಾರವನ್ನು ಗಳಿಸಿಕೊಂಡು ಮನುಷ್ಯರ ಅಗತ್ಯಗಳನ್ನೇ ನಿರ್ಲಕ್ಷಿಸುವ ಅಪಾಯವಿದೆ.
ಜಾಗತಿಕ ಉದ್ಯೋಗ ನಷ್ಟ: ಸಮಾಜ ಮತ್ತು ಆರ್ಥಿಕತೆಯನ್ನು ಎಐ ವ್ಯವಸ್ಥೆಯು ರಾತ್ರೋರಾತ್ರಿ ಬದಲಾಯಿಸಿಬಿಡುವ ಸಾಮರ್ಥ್ಯ ಹೊಂದಿರುವುದರಿಂದ ಜಾಗತಿಕವಾಗಿ ತೀವ್ರ ಆರ್ಥಿಕ ಅಸ್ಥಿರತೆ ಎದುರಾಗಬಹುದು.

ತಜ್ಞರು, ಸಂಶೋಧಕರು ಏನು ಹೇಳುತ್ತಾರೆ?

ಎಐ ಕ್ಷೇತ್ರದ ಪ್ರಮುಖ ಸಂಶೋಧಕರಾದ ಯೋಶುವಾ ಬೆಂಗಿಯೊ, ಜಾಫ್ರಿ ಹಿಂಟನ್​ ಮುಂತಾದವರು ಈಗಾಗಲೇ ಸೂಪರ್​ ಇಂಟೆಲಿಜೆನ್ಸ್​ನ ಅಪಾಯಗಳ ಬಗ್ಗೆ ಎಚ್ಚರಿಸಿದ್ದಾರೆ.
ಸುರಕ್ಷತಾ ಮಾನದಂಡಗಳ ಕೊರತೆ: ಪ್ರಸ್ತುತ ಎಐ ಮಾದರಿಗಳು ಹೇಗೆ ನಿರ್ಧಾರ ತೆಗೆದುಕೊಳ್ಳುತ್ತವೆ ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ. ಅಂತಹ ಸ್ಥಿತಿಯಲ್ಲಿ ಅವುಗಳಿಗೆ ಹೆಚ್ಚಿನ ಅಧಿಕಾರ ನೀಡುವುದು "ಬಾಂಬ್​ಗೆ ಬುದ್ಧಿಮತ್ತೆ ನೀಡಿದಂತೆ' ಎಂಬುದು ಸಂಶೋಧಕರ ಅಭಿಮತ.
ಕಟ್ಟುನಿಟ್ಟಿನ ನಿಯಮಗಳು ಬೇಕು: ಜಾಗತಿಕ ಮಟ್ಟದಲ್ಲಿ ಎಲ್ಲ ಎಐ ಪ್ರಯೋಗಾಲಯಗಳ ನಡುವೆ ಅಭಿವೃದ್ಧಿಯ ವೇಗವನ್ನು ಕಡಿತಗೊಳಿಸುವ ಅಥವಾ ತಾತ್ಕಾಲಿಕ ತಡೆ ನೀಡುವ ಒಪ್ಪಂದಗಳು (ಟೆಂಪರರಿ ಪಾಸ್​/ಪೇಸಿಂಗ್​ ಅಗ್ರೀಮೆಂಟ್ಸ್​) ತಕ್ಷಣವೇ ಜಾರಿಗೆ ಬರಬೇಕು ಎನ್ನುತ್ತಾರೆ ತಜ್ಞರು.

ಕಂಪನಿಗಳ ಸಮಜಾಯಿಷಿ...

ಓಪನ್​ಎಐ ಮತ್ತು ಆಂಥ್ರೊಪಿಕ್​ನಂತಹ ಸಂಸ್ಥೆಗಳು ಸಾರ್ವಜನಿಕವಾಗಿ ತಮ್ಮ ಸುರಕ್ಷತಾ ಕ್ರಮಗಳ ಬಗ್ಗೆ ಸಮರ್ಥನೆ ನೀಡುತ್ತಲೇ ಬಂದಿವೆ.
ಸುರತೆಗೆ ಮೊದಲ ಆದ್ಯತೆ: ತಾವು ಎಐ ಸುರಕ್ಷತಾ ಸಂಶೋಧನೆಗಾಗಿ ಕೋಟ್ಯಂತರ ಡಾಲರ್​ ಹೂಡಿಕೆ ಮಾಡುತ್ತಿರುವುದಾಗಿ ಮತ್ತು ಆಂತರಿಕವಾಗಿ "ರೆಡ್​ ಟೀಮಿಂಗ್​' ಮೂಲಕ ಅಪಾಯಗಳನ್ನು ಪರೀಕ್ಷಿಸುತ್ತಿರುವುದಾಗಿ ಕಂಪನಿಗಳು ಪ್ರತಿಪಾದಿಸುತ್ತವೆ.
ಸಂಶೋಧನೆಯ ಲಾಭಗಳು: ಕ್ಯಾನ್ಸರ್​ ಮುಂತಾದ ಮಾರಕ ಕಾಯಿಲೆಗಳಿಗೆ ಮದ್ದು ಹುಡುಕಲು, ಹವಾಮಾನ ವೈಪರೀತ್ಯ ತಡೆಯಲು ಹಾಗೂ ವಿಜ್ಞಾನದ ಬೆಳವಣಿಗೆಗೆ ಸೂಪರ್​ ಇಂಟೆಲಿಜೆನ್ಸ್​ನ ಅಗತ್ಯವಿದೆ ಎಂಬುದು ಕಂಪನಿಗಳ ವಾದ.
ಜಾಗತಿಕ ಸ್ಪರ್ಧೆ: ಚೀನಾ ಮತ್ತಿತರ ದೇಶಗಳು ಎಐ ಕ್ಷೇತ್ರದಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವಾಗ, ಅಮೆರಿಕದ ಕಂಪನಿಗಳು ಸಂಶೋಧನೆಯನ್ನು ನಿಲ್ಲಿಸಿದರೆ ಜಾಗತಿಕ ಭದ್ರತೆಗೆ, ಸಮತೋಲನಕ್ಕೆ ಧಕ್ಕೆಯಾಗುತ್ತದೆ ಎಂಬ ಆತಂಕ ಈ ಕಂಪನಿಗಳದ್ದು.

ಏನಿದು ಸೂಪರ್​ ಇಂಟೆಲಿಜೆನ್ಸ್​?

ಮಾನವನ ಗರಿಷ್ಠ ಬುದ್ಧಿಮತ್ತೆ, ಸಾಮರ್ಥ್ಯ ಮತ್ತು ಸೃಜನಶೀಲತೆಯನ್ನು ಸಂಪೂರ್ಣವಾಗಿ ಮೀರಿಸುವ ಕೃತಕ ಬುದ್ಧಿಮತ್ತೆಯ ಹಂತವಿದು. ವಿಜ್ಞಾನ, ಕಲೆ, ಆಡಳಿತ, ನಿರ್ಧಾರ ಕೈಗೊಳ್ಳುವುದು ಮತ್ತು ಜಟಿಲ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಇದು ವಿಶ್ವದ ಅತ್ಯಂತ ಬುದ್ಧಿವಂತ ಮಾನವನಿಗಿಂತಲೂ ಕೋಟಿ ಪಟ್ಟು ವೇಗವಾಗಿ ಹಾಗೂ ನಿಖರವಾಗಿ ಕಾರ್ಯನಿರ್ವಹಿಸಬಲ್ಲದು. ತನ್ನನ್ನು ತಾನೇ ಸುಧಾರಿಸಿಕೊಂಡು ಬೆಳೆಯುವ ಶಕ್ತಿ ಇದಕ್ಕೆ ಇರುತ್ತದೆ.

ಮುಂದಿನ ದಾರಿ ಏನು?

ಜೇಕಬ್​ ಕಾಕ್ಸನ್​ ಅವರ ರಾಜೀನಾಮೆಯು ಎಐ ಉದ್ಯಮದಲ್ಲಿ ಜಾಗತಿಕ ನಿಯಂತ್ರಣದ ಅಗತ್ಯವನ್ನು ಎತ್ತಿ ತೋರಿಸಿದೆ. ಖಾಸಗಿ ಕಂಪನಿಗಳ ಪರಸ್ಪರ ಪೈಪೋಟಿಗೆ ಮಾನವಕುಲದ ಭವಿಷ್ಯವನ್ನು ಅಡವಿಡಬಾರದು. ಸರ್ಕಾರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ತಕ್ಷಣವೇ ಮಧ್ಯಪ್ರವೇಶಿಸಿ, ಸೂಪರ್​ ಇಂಟೆಲಿಜೆನ್ಸ್​ ಸಂಶೋಧನೆಗೆ ಕಟ್ಟುನಿಟ್ಟಿನ ಕಾನೂನುಗಳನ್ನು ಮತ್ತು ಜಾಗತಿಕ ಸುರಕ್ಷತಾ ಚೌಕಟ್ಟನ್ನು ರೂಪಿಸುವುದು ಇಂದಿನ ಅಗತ್ಯವಾಗಿದೆ.