ನ್ಯೂಸ್

500 ಕೋಟಿ ಕ್ಲಬ್​ ಸೇರಿದ ಗದರ್-2; ಪಠಾಣ್​ ದಾಖಲೆ ಉಡೀಸ್​!

ಮುಂಬೈ: ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್​ ಸಿನಿ ಬದುಕಿಗೆ ಹೊಸ ತಿರುವು ನೀಡಿದ ಗದರ್​-2 ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದ್ದು, ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳಾಗುತ್ತ ಬಂದರು ಅದರ ಕ್ರೇಜ್​ ಮಾತ್ರ ಇನ್ನೂ ಕಡಿಮೆಯಾಗಿಲ್ಲ.

ಇದೀಗ ಚಿತ್ರ ಹೊಸ ಮೈಲಿಗಲ್ಲೊಂದನ್ನು ನಿರ್ಮಿಸಿದ್ದು, 500 ಕೋಟಿ ರೂಪಾಯಿ ಕ್ಲಬ್​ ಸೇರಿದೆ. ಭಾನುವಾರ ಚಿತ್ರ 7.8 ಕೋಟಿ ರೂಪಾಯಿ ಕಮಾಯಿ ಮಾಡುವ ಮೂಲಕ ಈ ಸಾಧನೆ ಮಾಡಿದೆ. ಶಾರುಖ್​ ಖಾನ್​ ಅವರ ಪಠಾಣ್​ ಚಿತ್ರದ ದಾಖಲೆಯನ್ನು ಗದರ್​-2 ಚಿತ್ರ ಮುರಿದಿದೆ ಎಂದು ಮಾತು ಕೇಳಿ ಬರುತ್ತಿದೆ.

ಕಲೆಕ್ಷನ್​ ವಿಚಾರವಾಗಿ ಗದರ್​-2 ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ. ಶಾರುಖ್​ ಖಾನ್​ ನಟನೆಯ ಪಠಾಣ್​ ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಭಾರತದ ಸಿನಿಮಾಗಳ ಅಬ್ಬರಕ್ಕೆ ನಲುಗಿದ್ದ ಬಾಲಿವುಡ್​ಗೆ ಈ ಎರಡು ಚಿತ್ರಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

2001ರಲ್ಲಿ ಬಿಡುಗಡೆಯಾಗಿದ್ದ ಗದರ್​-ಏಕ್​ ಪ್ರೇಮ್​ ಕಥಾ ಚಿತ್ರದ ಮುಂದುವರೆದ ಭಾಗವಾದ ಗದರ್​-2 ಆಗಸ್ಟ್​ 11ರಂದು ವಿಶ್ವದಾದ್ಯಂತ ತೆರೆ ಕಂಡಿತ್ತು. ಚಿತ್ರತಂಡ ಕಳೆದ ಶನಿವಾರ ಸಕ್ಸಸ್​ ಮೀಟ್​ ಸಹ ಹಮ್ಮಿಕೊಂಡಿತ್ತು.