ಉತ್ತರಪ್ರದೇಶ: ಭಾರತದಲ್ಲಿ ವಿವಿಧೆಡೆ ಚೆನ್ನಾಗಿ ಮಳೆಯಾಗುತ್ತಿದ್ದರೆ, ಇನ್ನು ಕೆಲ ರಾಜ್ಯಗಳಲ್ಲಿ ಹವಮಾನ ವೈಪರೀತ್ಯದಿಂದ ಉಷ್ಣತೆ ಹೆಚ್ಚಾಗಿದೆ. ಉತ್ತರಪ್ರದೇಶ ಕೂಡ ಇದಕ್ಕೆ ಹೊರತಾಗಿಲ್ಲ. ಇದೇ ಕಾರಣಕ್ಕೆ ಇಲ್ಲಿ ಬೇಸಿಗೆ ರಜೆ ವಿಸ್ತರಿಸಲಾಗಿದೆ.
ಹೌದು, ಉತ್ತರಪ್ರದೇಶ ರಾಜ್ಯ ಶಿಕ್ಷಣ ಇಲಾಖೆಯು ಈಗ ಎಲ್ಲಾ ಸಂಯೋಜಿತ ಶಾಲೆಗಳಲ್ಲಿ ಬೇಸಿಗೆ ರಜೆಯನ್ನು ಜುಲೈ 02 ರವರೆಗೆ ವಿಸ್ತರಿಸಿದೆ. ಬಿಸಿಲಿನ ಬೇಗೆಯನ್ನು ಗಮನದಲ್ಲಿಟ್ಟುಕೊಂಡು, ಉತ್ತರ ಪ್ರದೇಶ ಸರ್ಕಾರವು ಶಾಲೆಗಳನ್ನು ಸದ್ಯಕ್ಕೆ ಮುಚ್ಚಲು ನಿರ್ಧರಿಸಿದೆ. ಜೂನ್ 27 ರಂದು ಶಾಲೆಗಳು ಪುನರಾರಂಭವಾಗಬೇಕಿತ್ತು. ಆದರೆ ಈಗ ಹೊಸ ಆದೇಶ ಹೊರಡಿಸಿದ ನಂತರ, ಒಂದು ವಾರದ ನಂತರ ಅಂದರೆ ಜುಲೈ 03 ರಿಂದ ಶಾಲೆಗಳು ಮತ್ತೆ ತೆರೆಯಲಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಉತ್ತರ ಪ್ರದೇಶ ಮತ್ತು ದೇಶದ ಇತರ ಹಲವು ಪ್ರದೇಶಗಳಲ್ಲಿ ತೀವ್ರ ಶಾಖದ ಅಲೆ ಇದೆ. ಆದ್ದರಿಂದ ಮಕ್ಕಳಿಗೆ ಈ ಶಾಖದ ಹೊಡೆತದಿಂದ ರಕ್ಷಿಸಲು, ಯುಪಿ ಸರ್ಕಾರವು ಬೇಸಿಗೆ ರಜೆ ವಿಸ್ತರಿಸಿದೆ. ಉತ್ತರ ಪ್ರದೇಶ ಬೇಸಿಗೆ ರಜೆಯನ್ನು ವಿಸ್ತರಿಸುತ್ತಿರುವುದು ಇದು ಎರಡನೇ ಬಾರಿ. ಶಾಲೆಗಳು ಜೂನ್ 15 ರಂದು ಪುನರಾರಂಭವಾಗಬೇಕಿತ್ತು, ಆದರೆ ಅದರ ದಿನಾಂಕವನ್ನು ಮೊದಲು ಜೂನ್ 25ಕ್ಕೆ ಮತ್ತು ಈಗ ಜುಲೈ 02 ಕ್ಕೆ ವಿಸ್ತರಿಸಲಾಗಿದೆ.
ಶಾಲೆ ತೆರೆಯುವ ಮುನ್ನ ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ. ಇದಲ್ಲದೆ, ಕೌನ್ಸಿಲ್ ಅಡಿಯಲ್ಲಿ ನಡೆಯುವ ಮಾನ್ಯತೆ ಪಡೆದ ಶಾಲೆಗಳಲ್ಲಿ ಬೇಸಿಗೆ ರಜೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಶಾಲಾ ಆಡಳಿತ ಸಮಿತಿಗೆ ಅಧಿಕಾರ ನೀಡಲಾಗುವುದು ಎಂದು ಯುಪಿ ಸರ್ಕಾರದ ಅಧಿಕೃತ ಆದೇಶದಲ್ಲಿ ಹೇಳಲಾಗಿದೆ.