ಬಾಗಲಕೋಟೆ; ಬಾಲ್ಯದಿಂದಲೂ ನಾಗರಿಕ ಸೇವೆ ಹಂಬಲ, ಶಿಸ್ತಿಗೆ ನೀಡಿದ ಪ್ರಾಮುಖ್ಯತೆ ಮತ್ತು ಅದರಿಂದ ಕಲಿತ ಪಾಠ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎನ್ನುವುದು ಈ ಬಾರಿ ಐಎಫ್ಎಸ್‌ನಲ್ಲಿ 37ನೇ ರ‍್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಹುನಗುಂದದ 25ರ ಯುವಕ ಸುಮಂತ್ ಜನಾದ್ರಿ ಅಭಿಪ್ರಾಯ. ಶಿಸ್ತು ಜೀವನಶೈಲಿಯ ಒಂದು ಭಾಗವಾದರೆ ಸಾಧನೆಯ ಹಾದಿ ಸುಗಮ ಎನ್ನುವುದು ಸುಮಂತ್ ಖಚಿತ ನುಡಿ. ಶಿಕ್ಷಣ, ಅಧ್ಯಯನ, ಗುರಿ ತಲುಪಿದ ಹಂತ, ಎದುರಾದ ಸವಾಲುಗಳು, ಓದಿನುದ್ದಕ್ಕೂ ಜತೆಯಾದ ಆತ್ಮವಿಶ್ವಾಸ ಹೀಗೆ ಹಲವಾರು ವಿಷಯಗಳನ್ನು ಸುಮಂತ್ ‘ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ’ನ ಸಂಡೇ ಗೆಸ್ಟ್ ಆಗಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ| kempegowda-airport
ಕನಸು ಕಾಣುವುದು ದೊಡ್ಡದಲ್ಲ, ಅದನ್ನು ನನಸು ಮಾಡುವತ್ತ ಪಯಣ ಬೆಳೆಸಿ, ಪರಿಶ್ರಮ ಪಟ್ಟು ಅದರಲ್ಲಿ ಸ್ಥಿರತೆ ಕಾಣುವುದು ಮುಖ್ಯ. ಸ್ಥಿರತೆ ಮತ್ತು ಶಿಸ್ತು ಇದ್ದರೆ ಸಾಧನೆ ಹಾದಿ ಸುಗಮ ಎನ್ನುವುದಕ್ಕೆ ಸುಮಂತ ಅವರಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ಧಾರವಾಡ ಕೃಷಿ ವಿವಿಯಲ್ಲಿ ಪದವಿ ಪಡೆದ ಸುಮಂತಗೆ ಬಾಲ್ಯದಲ್ಲೇ ಸಾಮಾಜಿಕ ಜವಾಬ್ದಾರಿಗಳನ್ನು ಕೈಗೆತ್ತಿಕೊಳ್ಳುವ ತುಡಿತ ನಾಗರಿಕ ಸೇವೆಗೆ ಸೇರಬೇಕೆಂಬ ಹಂಬಲ, ಪದವಿಯೊಂದಿಗೆ ಸಾಗಿತು. ಪದವಿ ನಂತರ ಹಂತ-ಹಂತವಾಗಿ ಅಭ್ಯಾಸ ಪ್ರಾರಂಭ. ಕೋಚಿಂಗ್‌ಗಾಗಿ ದೆಹಲಿಯತ್ತ ಪಯಣ. ಅದರಂತೆ 2024ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದಾರೆ. ಬಾಲ್ಯದಿಂದಲೂ ಒಳ್ಳೆಯ ಅಂಕ ಪಡೆದ ಸುಮಂತಗೆ ಪರೀಕ್ಷಾ ಪೂರ್ವ ತಯಾರಿಯುದ್ದಕ್ಕೂ ಪರಿಶ್ರಮ ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪ ಬೆಂಬಿಡದೆ ಜತೆಯಾಗಿ ಹೆಜ್ಜೆ ಹಾಕಿವೆ. ಇದರೊಂದಿಗೆ ಐಎಫ್ಎಸ್ ಆಗುವ ಹಂಬಲವು ಇವರಲ್ಲಿ ಮನೆ ಮಾಡಿದೆ.
ಸಾಧನೆಗೆ ಶಿಸ್ತೇ ಅಡಿಪಾಯ:
ಬಾಗಲಕೋಟೆ ಜಿಲ್ಲೆ ಹುನಗುಂದದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿದ ಇವರು, ಹುಬ್ಬಳ್ಳಿಯಲ್ಲಿ ಪಿಯುಸಿ ಅಲ್ಲಿಂದ ಧಾರವಾಡದ ಕೃಷಿ ವಿವಿಯಲ್ಲಿ ಪದವಿ ಪಡೆದರು. ನಾಗರಿಕ ಸೇವೆಯನ್ನು ಧ್ಯೇಯವಾಗಿಟ್ಟುಕೊಂಡ ಸುಮಂತ್ ಕೆಲಕಾಲ ದೆಹಲಿಗೆ ತೆರಳಿ ಪರೀಕ್ಷಾ ತರಬೇತಿ ಪಡೆದರು. ಎಂಎಸ್ಸಿ ಪದವೀಧರರಾಗಿರುವ ಸುಮಂತ್‌ನ ತಂದೆ ಸೋಮಶೇಖರ್, ಬಿಎ ಮುಗಿಸಿದ ತಾಯಿ ಸುರೇಖಾ ಗೃಹಿಣಿಯಾಗಿದ್ದು, ಸಹೋದರಿ ಸುಪ್ರಿತಾ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.
ಸ್ಥಳೀಯವಾಗಿಯೇ ಅಭ್ಯಾಸ:
ಪ್ರಾರಂಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರೂ ಅದರ ಮೂಲ ಸ್ವರೂಪವನ್ನು ತಿಳಿದುಕೊಳ್ಳವ ಮೂಲಕ ಪ್ರಾಥಮಿಕವಾಗಿ ಅದಕ್ಕೆ ಬೇಕಾದ ಎಲ್ಲ ವಿಷಯ-ವಸ್ತುಗಳನ್ನು ಕಲೆಹಾಕುವತ್ತ ಸಾಗಬೇಕು. ಹೆಚ್ಚು ಜ್ಞಾನ ಹಾಗೂ ಆಸಕ್ತಿಯಿರುವ ವಿಷಯವೇ ಐಚ್ಛಿಕವಾಗಿರಬೇಕು. ಏಕೆಂದರೆ ಇಲ್ಲಿ ಅಧಿಕ ಅಂಕ ಪಡೆಯುವ ಅನಿವಾರ್ಯತೆ ಇದೆ. ಪ್ರಾಥಮಿಕವಾಗಿ ಪರೀಕ್ಷೆಯ ಆಳ-ಅಗಲ ತಿಳಿದುಕೊಂಡರೆ ಓದಿಗೆ ಅನುಕೂಲವಾಗುತ್ತದೆ ಎನ್ನುವುದು ಸುಮಂತ್ ಅಭಿಪ್ರಾಯ.
ಪರೀಕ್ಷೆಯ ಸ್ವರೂಪ ತಿಳಿದುಕೊಳ್ಳುವ ಅಗತ್ಯತೆ:
ಇದನ್ನೂ ಓದಿ: ಸ್ವಾತಂತ್ರ್ಯ ಚಳವಳಿಯನ್ನು ವಿರೂಪಗೊಳಿಸಿದ ಆರೋಪ; ಕೇಸರಿ 2 ಸಿನಿಮಾ ನಿರ್ಮಾಪಕರ ವಿರುದ್ಧ ಎಫ್ಐಆರ್| akshay-kumar
ದಿನದಲ್ಲಿ 1 ಗಂಟೆ ದಿನಪತ್ರಿಕೆ ಓದಿಗೆ ಮೀಸಲಿಡಲೇಬೇಕು. ಏಕೆಂದರೆ ನಾವು ಓದುವ ಮ್ಯಾಗ್‌ಜಿನ್‌ನಲ್ಲಿನ ಕಂಟೆಂಟ್‌ಗೂ ದಿನಪತ್ರಿಕೆಗಳಲ್ಲಿ ಬರುವ ವಿಷಯ ಸಾರಕ್ಕೂ ತುಂಬಾ ವ್ಯತ್ಯಾಸವಿರುತ್ತದೆ. ನಿತ್ಯ ಪತ್ರಿಕೆ ಓದುವುದರಿಂದ ಆಳವಾದ ಅಧ್ಯಯನ ಸಾಧ್ಯವಾಗುತ್ತದೆ. ಅದರಿಂದ ಅಭಿಪ್ರಾಯವನ್ನು ಹಂಚಿಕೊಳ್ಳಲು ಸಹಕರಿಸುತ್ತದೆ ಎನ್ನುತ್ತಾರೆ ಸುಮಂತ್.
ಪ್ರಚಲಿತ ವಿದ್ಯಮಾನಗಳ ಜ್ಞಾನಕ್ಕೆ ಪತ್ರಿಕೆ ಸೂಕ್ತ:
ಸ್ಪರ್ಧಾತ್ಮಕ ಪರೀಕ್ಷೆಗಳ ಓದಿಗೆ ನಿರಂತರ ಅಧ್ಯಯನ ಅಗತ್ಯ. ಆದರೆ, ಅದರಲ್ಲಿ ದಿನನಿತ್ಯದ ಚಟುವಟಿಕೆಗಳಿಗೆ ನೀಡಬೇಕಾದ ಪ್ರಾಮುಖ್ಯವನ್ನು ಕಡೆಗಣಿಸಬಾರದು. ಎಲ್ಲವನ್ನೂ ಸರಿದೂಗಿಸಿಕೊಂಡೇ ಈ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ಮುಂದುವರಿಯಬೇಕು. ನಾಳೆ ಮಾಡಬೇಕಾದ ಕೆಲಸಗಳಿಗೆ ಇಂದೇ ಯೋಜನೆ ಹಾಕಿಕೊಳ್ಳಬೇಕು. ಪರೀಕ್ಷೆಯಲ್ಲಿ ಮಾತ್ರವಲ್ಲ, ಓದಿನಲ್ಲೂ ಸಮಯದ ಸರಿದೂಗಿಸುವಿಕೆಯನ್ನು ಕಲಿತು, ಆ ನಿಟ್ಟಿನಲ್ಲಿ ಪರಿಶ್ರಮ ಪಟ್ಟು ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವುದು ಸುಮಂತ್ ಕಿವಿಮಾತು.
ಸಮಯಪಾಲನೆ ಅತ್ಯಗತ್ಯ:
ಭೀಮಸಿ ಕೋಳೆಪ್ಪನವರ