ನ್ಯೂಸ್

ಶಿಕ್ಷಣ ರಂಗದ ಉತ್ಕೃಷ್ಟ ಸಾಧಕ ಸುಮಂತ್ ಜೈನ್: ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಎಕ್ಸೆಲ್, ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿ

ಬೆಳ್ತಂಗಡಿ ತಾಲೂಕಿನ ಬಂಗಾಡಿ ಗ್ರಾಮದ ಸಣ್ಣ ಗುಡಿಸಲಿನಿಂದ ಕಡಿರುದ್ಯಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬರಿಗಾಲಲ್ಲಿ ಬರುತ್ತಿದ್ದ ಜೈನರ ಹುಡುಗ ಸುಮಂತ್ ಕುಮಾರ್​ಗೆ ಬಾಲ್ಯದಲ್ಲಿಯೇ ಬೊಗಸೆ ತುಂಬಾ ಕನಸು. ದೊಡ್ಡವನಾದ ಬಳಿಕ ಏನಾದರೂ ಸಾಧಿಸಬೇಕೆಂಬ ಬಯಕೆ. ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿವರೆಗೆ ಬಡತನದಲ್ಲೇ ಶಿಕ್ಷಣ ಪೂರೈಸಿದರೂ ಸುಮಂತ್ ಕುಮಾರ್ ತನ್ನ ಬಾಲ್ಯದ ಕನಸು ನನಸಾಗಿಸಿದ್ದಾರೆ. ಅದೇ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ವಿಶಾಲ ದಂಡೆಯ ಮೇಲೆ ಸುಮಂತ್ ಕುಮಾರ್ ಅವರು ಕಟ್ಟಿ ಬೆಳೆಸುತ್ತಿರುವ ‘ಎಕ್ಸೆಲ್ ಪದವಿ ಪೂರ್ವ ಕಾಲೇಜು’ ಇಂದು ಕಂಗೊಳಿಸುತ್ತಿದೆ. ಒಂದು ಉತ್ಕೃಷ್ಟ ಶಿಕ್ಷಣ ಸಂಸ್ಥೆಯಾಗಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಇಡೀ ಕರ್ನಾಟಕದ ಗಮನ ಸೆಳೆಯುತ್ತಿದೆ. ಇವರ ಸಾಧನೆಯನ್ನು ಗುರುತಿಸಿ ‘ವಿಜಯವಾಣಿ’ ಪತ್ರಿಕೆ ಪ್ರತಿಷ್ಠಿತ ‘ವಿಜಯರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

ಮಂಗಳೂರು - ಬಿ.ಸಿ.ರೋಡ್, ಕಾರ್ಕಳ - ಮೂಡುಬಿದಿರೆ, ಮಡಿಕೇರಿ - ಪುತ್ತೂರು ಮುಂತಾದ ಊರುಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸಂರ್ಪಸುವ ಹೆದ್ದಾರಿಗಳೆಲ್ಲ ಸಂಧಿಸುವುದು ಗುರುವಾಯನಕೆರೆ ಎನ್ನುವ ಪುಟ್ಟ ಊರಿನಲ್ಲಿ. ಐತಿಹಾಸಿಕ ಮಹತ್ವದ ಗುರುವಾಯನಕೆರೆಯ ವಿಶಾಲ ದಂಡೆಯ ಮೇಲೆಯೆ ವಿರಾಜಮಾನವಾಗಿದೆ ಎಕ್ಸೆಲ್ ಪದವಿ ಪೂರ್ವ ಕಾಲೇಜು. ರಸಾಯನ ವಿಜ್ಞಾನ ಪ್ರಾಧ್ಯಾಪಕರಾಗಿ, ನೀಟ್ ಮತ್ತು ಜೆಇಇ ತರಬೇತುದಾರರಾಗಿ ವಿದ್ಯಾರ್ಥಿಗಳ ವಿಶೇಷ ಪ್ರೀತಿಗೆ ಪಾತ್ರರಾದ ಸುಮಂತ್ ಕುಮಾರ್ ಜೈನ್ ಅವರು ತಮ್ಮ ಶಿಕ್ಷಕ ಮಿತ್ರರೊಂದಿಗೆ ಸೇರಿ ಸ್ಥಾಪಿಸಿದ ಎಕ್ಸೆಲ್ ಪ.ಪೂ ಕಾಲೇಜು ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ.

ಎಕ್ಸೆಲ್​ನ ಸ್ಥಾಪಕರಾಗಿ, ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸುಮಂತ್ ಕುಮಾರ್ ಜೈನ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಇಂದು ಪದವಿ ಪೂರ್ವ ಕಾಲೇಜಿನ ಎರಡು ಕ್ಯಾಂಪಸ್​ಗಳು, ಪ್ರೌಢಶಾಲೆ, ಎರಡು ಪ್ರಾಥಮಿಕ ಶಾಲೆಗಳು, ನೀಟ್ ಹಾಗೂ ಜೆ.ಇ.ಇ. ಲಾಂಗ್​ಟಮ್ರ್ ಕೋಚಿಂಗ್ ಸೆಂಟರ್ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತದಲ್ಲಿದೆ. ಎಕ್ಸೆಲ್​ನ ಯಶಸ್ಸಿನ ಪಯಣದಲ್ಲಿ ಪ್ರಾಮಾಣಿಕತೆ, ಪರಿಶ್ರಮ, ಸಮಾಜ ಸೇವೆಯ ನಿಜವಾದ ಹಂಬಲವಿದೆ.

ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಂದು ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೇಷ್ಠ ಗುಣಮಟ್ಟದ ಶಿಕ್ಷಣ ಪಡೆದು ಮೆರಿಟ್ ಮೂಲಕ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಪ್ರವೇಶಿಸುತ್ತಿದ್ದಾರೆ. 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿರುವ ಸುಸಜ್ಜಿತ ಹಾಸ್ಟೆಲ್​ನಲ್ಲಿದ್ದು ಕಲಿಯುತ್ತಿದ್ದರೆ, 500ಕ್ಕೂ ಅಧಿಕ ಮಂದಿಗೆ ಸುಮಂತ್ ಕುಮಾರ್ ತನ್ನ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ ಕಲ್ಪಿಸಿ ಅವರ ಬಾಳಿಗೆ ಬೆಳಕಾಗಿದ್ದಾರೆ.

ರತ್ನಮಾನಸದಲ್ಲಿ ಜೀವನ ಪಾಠ: ಸತೀಶ್ ಕುಮಾರ್ ಜೈನ್-ಶುಭಲತಾ ಜೈನ್ ದಂಪತಿ ಪುತ್ರನಾಗಿ 1988ರಲ್ಲಿ ಜನಿಸಿದ ಸುಮಂತ್ ಕುಮಾರ್ ಪ್ರತಿಷ್ಠಿತ ಜೈನ ಮನೆತನದವರು. ಆದರೆ ಭೂಮಸೂದೆಯಿಂದ ಕುಟುಂಬದ ಹಿರಿಯರು ವಿಶಾಲ ಕೃಷಿಭೂಮಿ ಕಳಕೊಂಡ ಪರಿಣಾಮ ಬಾಲ್ಯದಲ್ಲಿ ಬಡತನ ಅನುಭವಿಸಿದರು. ಕಡಿರುದ್ಯಾವರದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಬಳಿಕ ಪ್ರೌಢಶಿಕ್ಷಣಕ್ಕಾಗಿ ಉಜಿರೆಯ ರತ್ನಮಾನಸಕ್ಕೆ ಕಾಲಿರಿಸಿದರು. ಬದುಕಿನಲ್ಲಿ ಸಾಧಿಸ ಬೇಕಿದ್ದರೆ ಶಿಕ್ಷಣದ ಜತೆಗೆ ಶಿಸ್ತು, ದೃಢ ಸಂಕಲ್ಪ, ಪರಿಶ್ರಮ ಅಗತ್ಯ ಎನ್ನುವ ಜೀವನ ಪಾಠವನ್ನು ರತ್ನಮಾನಸದಲ್ಲಿ ಕಲಿತರು. ಬದುಕು ಬದಲಾಯಿತು.

ವೃತ್ತಿ ಜೀವನಕ್ಕೆ ಪ್ರವೇಶ

ಎಂಎಸ್​ಸಿಯಲ್ಲಿ ಮಾಹೆ ವಿ.ವಿ.ಗೆ 2ನೇ ರ್ಯಾಂಕ್ ಪಡೆದ ಸುಮಂತ್ ಅವರಿಗೆ ಕಂಪನಿಯೊಂದರ ಉದ್ಯೋಗ ಅರಸಿ ಬಂದಿತ್ತು. ಆದರೆ ಬೋಧನೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಉಪನ್ಯಾಸಕ ಹುದ್ದೆ ಬಯಸಿದರು. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಉಪನ್ಯಾಸಕರಾಗಿ ಆಯ್ಕೆಯಾದರು. 12 ವರ್ಷಗಳ ಕಾಲ ಆಳ್ವಾಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಅವರು ಅದೇ ಅವಧಿಯಲ್ಲಿ ಸಿಇಟಿ, ನೀಟ್, ಜೆಇಇ ತರಬೇತುದಾರರಾಗಿ ರಾಜ್ಯದ ವಿವಿಧ ಸಂಸ್ಥೆಗಳಲ್ಲಿ ಬೋಧಿಸುತ್ತಾ ಅನುಭವ ಹಾಗೂ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡರು.

ಪಿಯು ಶಿಕ್ಷಣದಲ್ಲಿ ಹೊಸ ಶಕೆ

ಎಕ್ಸೆಲ್ ಕಾಲೇಜು ಸ್ಥಾಪನೆಯಾದ ಬಳಿಕ ನಿರಂತರವಾಗಿ ದ್ವಿತೀಯ ಪಿಯುಸಿ, ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿ ಕೊಳ್ಳುವಂತ ಫಲಿತಾಂಶ ದಾಖಲಿಸುತ್ತಾ ಬಂದಿದೆ. ಪದವಿ ಪೂರ್ವ ಶಿಕ್ಷಣದಲ್ಲಿ ಎಕ್ಸೆಲ್ ಹೊಸ ಶಕೆ ಪ್ರಾರಂಭಿಸಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣದ ಜತೆ ಅತ್ಯುತ್ತಮ ನೀಟ್, ಜೆಇಇ, ಸಿಇಟಿ ತರಬೇತಿ ನೀಡುವುದು ಎಕ್ಸೆಲ್ ಸಂಸ್ಥೆಯ ಉದ್ದೇಶವಾಗಿದೆ. ಹಾಗಾಗಿ ದೇಶದ ಪ್ರತಿಷ್ಠಿತ ಐಐಟಿ, ಎನ್​ಐಐಟಿ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಎಕ್ಸೆಲ್​ನ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ಮಹಾರಾಷ್ಟ್ರ, ದುಬೈ, ಕತಾರ್, ಕುವೈಟ್​ನ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.

ಎಕ್ಸೆಲ್ ಯಶೋಗಾಥೆ

ಆರಂಭದ ವರ್ಷದಲ್ಲೇ ಶೇಕಡಾ ನೂರು ಫಲಿತಾಂಶ ದಾಖಲಿಸಿದ್ದು ಮಾತ್ರವಲ್ಲ ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸಂಸ್ಥೆ ಕರಾವಳಿಯಲ್ಲಿ ಸಂಚಲನ ಮೂಡಿಸಿತು. ಅಲ್ಲಿಂದ ಎಕ್ಸೆಲ್ ಯಶೋಗಾಥೆ ಆರಂಭ. 254 ವಿದ್ಯಾರ್ಥಿಗಳಿದ ಆರಂಭವಾದ ಎಕ್ಸೆಲ್ ಪಿಯು ಕಾಲೇಜು ಐದೇ ವರ್ಷದಲ್ಲಿ ಬೃಹತ್ ಸ್ವರೂಪದಲ್ಲಿ ಬೆಳೆದು ನಿಂತಿದೆ. ಪ್ರತಿವರ್ಷ ಪಿಯು ಬೋರ್ಡ್ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎಕ್ಸೆಲ್​ನ ವಿದ್ಯಾರ್ಥಿಗಳು ರಾಷ್ಟ್ರವ್ಯಾಪಿ ಅಮೋಘ ಸಾಧನೆ ಮಾಡುತ್ತಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಎಕ್ಸೆಲ್ ವಿದ್ಯಾಸಂಸ್ಥೆಯನ್ನು ಅರಸಿಕೊಂಡು ಬರುವಂತಾಗಿದೆ.

ಇನ್ಪಿನಿಟಿ ಶಿಕ್ಷಣ ಪ್ರತಿಷ್ಠಾನ ಆರಂಭ

ದೊಡ್ಡವನಾದ ಬಳಿಕ ಏನಾದರೂ ಸಾಧಿಸಬೇಕೆಂಬ ಬಾಲ್ಯದ ಬಯಕೆ ಸುಮಂತ್ ಅವರಿಗೆ ನೆನಪಾಯಿತು. ಉದ್ಯೋಗ ತೊರೆದರು. ಮುಂದಿನ ಹಾದಿಯ ಬಗ್ಗೆ ದೃಢ ನಿಲುವು ತಳೆದರು. ಒಂದು ಮುಂಜಾನೆ ತಂದೆ, ತಾಯಿಯ ಕಾಲಿಗೆರಗಿ ಆಶೀರ್ವಾದ ಪಡೆದ ಸುಮಂತ್ ಅವರು ಗುರುವಾಯನಕೆರೆಗೆ ಆಗಮಿಸಿ ಇನ್ಪಿನಿಟಿ ಶಿಕ್ಷಣಪ್ರತಿಷ್ಠಾನ ಆರಂಭಿಸಿದರು. 2019ರಲ್ಲಿ ಪ್ರತಿಷ್ಠಾನದ ಮೂಲಕ ಎಕ್ಸೆಲ್ ಪದವಿ ಪೂರ್ವ ಕಾಲೇಜು ಹಾಗೂ ಎಕ್ಸೆಲ್ ನೀಟ್ ಕೋಚಿಂಗ್ ಸೆಂಟರ್ ತೆರೆದರು.

ಡಾ.ಎಂಎನ್​ಆರ್ ಪ್ರೋತ್ಸಾಹ

ಸಂಸ್ಥೆಯನ್ನು ಬೃಹತ್ ಸ್ವರೂಪದಲ್ಲಿ ಬೆಳೆಸುವುದು ಸುಮಂತ್ ಕುಮಾರ್ ಜೈನ್ ಅವರ ಕನಸಾಗಿತ್ತು. ಅದಕ್ಕೆ ಆರ್ಥಿಕ ನೆರವಿನ ಅಗತ್ಯ ಇತ್ತು. ಆದರೆ ಆರಂಭಿಕ ಹಂತದಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳು ಸಾಲ ನೀಡಲು ಹಿಂದೇಟು ಹಾಕಿದವು. ಆಗ ಸುಮಂತ್ ಕುಮಾರ್ ಅವರ ನೆರವಿಗೆ ಬಂದವರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು. ಎಸ್​ಸಿಡಿಸಿಸಿ ಬ್ಯಾಂಕ್ ಮೂಲಕ ಆರ್ಥಿಕ ನೆರವು ಒದಗಿಸಿ ಕಾಲೇಜು ಆರಂಭಿಸಲು ಸಹಕರಿಸಿದರು. ಸಂಸ್ಥೆ ಕಟ್ಟಲು ಇತರ ಹಣಕಾಸು ಸಂಸ್ಥೆಗಳು ನಿರಾಕರಿಸಿದಾಗ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಒದಗಿಸಿದ ಸಾಲ ಸೌಲಭ್ಯ ಹಾಗೂ ಪ್ರೋತ್ಸಾಹದ ಮಾತು ಯಾವತ್ತೂ ಮರೆಯುವಂತಿಲ್ಲ ಎಂದು ಸುಮಂತ್ ಕುಮಾರ್ ಜೈನ್ ಸ್ಮರಿಸಿಕೊಳ್ಳುತ್ತಿದ್ದಾರೆ.

ವೈದ್ಯಕೀಯ ಶಿಕ್ಷಣಕ್ಕೆ ರಹದಾರಿ

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆಯುವುದು ವೈದ್ಯಕೀಯ ಶಿಕ್ಷಣಕ್ಕೆ ರಹದಾರಿಯಾಗಿದೆ. ಪ್ರತಿವರ್ಷ ಇಲ್ಲಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ದೇಶದ ವಿವಿಧ ಏಮ್ಸ್​ಗಳಿಗೆ ಪ್ರವೇಶ ಪಡೆಯುತ್ತಿರುವುದು ಇದಕ್ಕೆ ನಿದರ್ಶನವಾಗಿದೆ. 2024ನೇ ಸಾಲಿನಲ್ಲಿ ನೀಟ್ ಬರೆದ 180 ವಿದ್ಯಾರ್ಥಿಗಳ ಪೈಕಿ 176 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. 26 ಮಂದಿ 550ಕ್ಕಿಂತ ಹೆಚ್ಚು ಅಂಕ ಹಾಗೂ 11 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. 35ನೇ ರಾಷ್ಟ್ರೀಯ ಕೆಟಗರಿ ರ್ಯಾಂಕ್ ಪಡೆದ ಸಂಸ್ಥೆಯ ವಿದ್ಯಾರ್ಥಿನಿ ಸಂಜನಾ ಈರೈನವರ್ ಭೋಪಾಲ್​ನ ಏಮ್ಸ್ನಲ್ಲಿ ಸ್ಥಾನ ಪಡೆದರೆ, 720ರಲ್ಲಿ 692 ಅಂಕ ಪಡೆದ ಆದಿತ್ ಜೈನ್ ಭುವನೇಶ್ವರದ ಏಮ್ಸ್ನಲ್ಲಿ ಮೆಡಿಕಲ್ ಕೋರ್ಸ್​ಗೆ ಪ್ರವೇಶ ಪಡೆದಿದ್ದಾರೆ. ಈ ಬಾರಿಯ ನೀಟ್ ಪರೀಕ್ಷೆ ಅದೆಷ್ಟೇ ಕಠಿಣವಾಗಿದ್ದರೂ ಎಕ್ಸೆಲ್​ನ 248 ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಖಚಿತವಾಗಿದೆ. ಪರೀಕ್ಷೆ ಬರೆದವರೆಲ್ಲ ವೈದ್ಯಕೀಯ ಕೋರ್ಸ್​ಗೆ ಅರ್ಹರಾಗಿರುವುದು ಉಲ್ಲೇಖಾರ್ಹ. ಸುಮಂತ್ ಕುಮಾರ್ ಮತ್ತು ಅವರ ತಂಡದ ಶ್ರಮ ಸಾರ್ಥಕವಾಗಿದೆ.

ಕಲಿಕೆಯ ಜತೆ ಗಳಿಕೆ

ಉಜಿರೆಯ ಸಿದ್ದವನ ಗುರುಕುಲದಲ್ಲಿದ್ದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿಎಸ್​ಸಿ ಪದವಿ ಶಿಕ್ಷಣ ಪಡೆದರು. ರಸಾಯನ ಶಾಸ್ತ್ರ ಅವರ ಆಸಕ್ತಿಯ ವಿಷಯವಾಗಿತ್ತು. ಬ್ಯಾಂಕ್​ನಲ್ಲಿ ಶಿಕ್ಷಣ ಸಾಲ ಪಡೆದು ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮಣಿಪಾಲದ ಎಂಐಟಿಗೆ ಸೇರ್ಪಡೆಯಾದರು. ಬೋಧನೆಯ ಬಗ್ಗೆಯೂ ವಿಶೇಷ ಒಲವಿದ್ದ ಸುಮಂತ್ ಅವರು ಎಂಎಸ್​ಸಿ ಶಿಕ್ಷಣದ ಜತೆಗೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಟ್ಯೂಶನ್ ನೀಡಲು ಆರಂಭಿಸಿದರು. ಇದರಿಂದ ಕಲಿಕೆಯ ಜತೆ ಶಿಕ್ಷಣದ ಖರ್ಚಿಗೆ ಕೊಂಚ ಗಳಿಕೆಯೂ ಸಾಧ್ಯವಾಯಿತು.

ಎಕ್ಸೆಲ್ ಕೋಚಿಂಗ್ ಸೆಂಟರ್ ಶುರು

ದಶಕದ ಹಿಂದೆ ಬೆಳ್ತಂಗಡಿ, ಉಜಿರೆ ಪ್ರದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಪ್ರತ್ಯೇಕ ಕೇಂದ್ರಗಳಿರಲಿಲ್ಲ. ವಿದ್ಯಾರ್ಥಿಗಳು ದೂರದ ಮಂಗಳೂರಿಗೆ ಬರಬೇಕಾಗಿತ್ತು. ಸುಮಂತ್ ಅವರು ಊರಿಗೆ ಬರುತ್ತಿದ್ದ ಸಂದರ್ಭ ಕೆಲವು ಪಾಲಕರು ಈ ಬಗ್ಗೆ ಗಮನ ಸೆಳೆದಿದ್ದರು. ಆಗ ಸುಮಂತ್ ಅವರಿಗೆ ಕೋಚಿಂಗ್ ಸೆಂಟರ್ ತೆರೆಯುವ ಬಯಕೆ ಚಿಗುರೊಡೆಯಿತು. 2016ರಲ್ಲಿ ಬಾಡಿಗೆ ಕೊಠಡಿ ಪಡೆದು ‘ಎಕ್ಸೆಲ್ ಕೋಚಿಂಗ್ ಸೆಂಟರ್ ’ ತೆರೆದರು. ಭಾನುವಾರ ಮತ್ತು ಇತರ ರಜಾ ದಿನಗಳಲ್ಲಿ 4 ವಿದ್ಯಾರ್ಥಿಗಳಿಗೆ ಉಚಿತವಾಗಿ ಜೆಇಇ, ನೀಟ್ ತರಬೇತಿ ನೀಡುವ ಮೂಲಕ ಸಂಸ್ಥೆ ಆರಂಭವಾಯಿತು.

ನೀಟ್ ಲಾಂಗ್​ಟಮ್ರ್ ಕೋಚಿಂಗ್

ವಿಜ್ಞಾನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಸುಮಂತ್ ಕುಮಾರ್ ಅವರು ಗುರುವಾಯನಕೆರೆಯಲ್ಲಿ ನೀಟ್ ಹಾಗೂ ಜೆಇಇ ಲಾಂಗ್​ಟಮ್ರ್ ಕೋಚಿಂಗ್ ಸೆಂಟರ್ ಸ್ಥಾಪಿಸಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುವಾಗ ಬೇರೆ ಬೇರೆ ಕಾರಣಗಳಿಂದ ವೈದ್ಯಕೀಯ ಪ್ರವೇಶ ಪಡೆಯಲಾಗದೆ ಇರುವ ವಿದ್ಯಾರ್ಥಿಗಳಿಗೆ ಒಂದು ವರ್ಷ ಪರ್ಯಂತ ಸಂಪೂರ್ಣ ನೀಟ್ ತರಬೇತಿ ನೀಡುವ ಕಾರ್ಯಕ್ರಮವೇ ನೀಟ್ ಲಾಂಗ್​ಟಮ್ರ್ ಕೋಚಿಂಗ್. ಅದೇ ರೀತಿ ಜೆಇಇ ಕೋಚಿಂಗ್ ಕೂಡ ನೀಡಲಾಗುತ್ತಿದೆ.

ಶಿಸ್ತಿನ ಶಿಕ್ಷಣ

ಎಕ್ಸೆಲ್ ಕ್ಯಾಂಪಸ್​ನಲ್ಲಿ ಹುಡುಗರಿಗೆ ಹಾಗೂ ಹುಡುಗಿಯರಿಗೆ ಪ್ರತ್ಯೇಕ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ ಇದೆ. ಮೊಬೈಲ್ ಬಳಸುವಂತಿಲ್ಲ. ಟಿ.ವಿ.ನೋಡುವಂತಿಲ್ಲ. ಮುಂಜಾನೆ 5ಕ್ಕೆ ಏಳಬೇಕು. ಪ್ರಾರ್ಥನೆ, ಯೋಗಾಭ್ಯಾಸದ ಬಳಿಕ ನೀಟ್, ಜೆಇಇ ತರಗತಿಗಳು. ಬೆಳಗ್ಗೆ 8.30ರಿಂದ ಸಾಯಂಕಾಲ 5.30ರವರೆಗೆ ತರಗತಿ. ಮಧ್ಯಾಹ್ನ 1 ಗಂಟೆ ಊಟದ ಬಿಡುವು. ರಾತ್ರಿ 6.39ರ ಬಳಿಕ ಹಾಸ್ಟೆಲ್​ನಲ್ಲಿ ಸ್ಟಡಿ ಸಮಯ. ಪಠ್ಯದ ಬಗ್ಗೆ ಸಂದೇಹವಿದ್ದರೆ ಹಾಸ್ಟೆಲ್​ನಲ್ಲೇ ಇರುವ ಉಪನ್ಯಾಸಕರು ವಿಷಯದ ವಿವರಣೆ ನೀಡುತ್ತಾರೆ. ಪ್ರತಿ ವಿದ್ಯಾರ್ಥಿಗೂ ಕೌನ್ಸೆಲಿಂಗ್ ವ್ಯವಸ್ಥೆ. ಕಾರ್ಡ್ ಬಳಸಿ ಫೋನ್ ಮೂಲಕ ಹೆತ್ತವರ ಜತೆ ಮಾತನಾಡಲು ಅವಕಾಶ..ಹೀಗೆ ಎಕ್ಸೆಲ್ ಅತ್ಯಂತ ಶಿಸ್ತಿನ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುತ್ತಿದೆ. ಇದರ ಜತೆಗೆ ಎಕ್ಸೆಲ್ ಲಾಂಗ್ ಟಮ್ರ್ ಕೋಚಿಂಗ್ ಸೆಂಟರ್ ಕಾರ್ಯ ನಿರ್ವಹಿಸುತ್ತಿದೆ.

ಸಮಾಜಮುಖಿ ಚಿಂತನೆ

ಧಾರ್ವಿುಕ, ಸಾಮಾಜಿಕ ಕಾರ್ಯಗಳಲ್ಲೂ ಮುಂಚೂಣಿಯಲ್ಲಿರುವ ಸುಮಂತ್ ಕುಮಾರ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಸಹಿತ ಹಲವು ರಿಯಾಯಿತಿ ನೀಡುತ್ತಿದ್ದಾರೆ. ಎಕ್ಸೆಲ್ ಶಿಕ್ಷಣ ಸಂಸ್ಥೆಯಲ್ಲಿ ಶತ ಶಿಕ್ಷಕರಿಗೆ ಸಹಸ್ರ ನಮನ, ರಾಜ್ಯಮಟ್ಟದ ವಿಜ್ಞಾನ ಮೇಳ, ಕನ್ನಡ ಅಕ್ಷರೋತ್ಸವ, ಯೋಧರು ಹಾಗೂ ಆರಕ್ಷಕರನ್ನು ಗೌರವಿಸುವ ರಕ್ಷಕ ನಮನ.. ಹೀಗೆ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಶಕ್ತಿಯಾಗಿದ್ದಾರೆ. ಸುಮಂತ್ ಅವರ ಸಾಧನೆಯನ್ನು ಪರಿಗಣಿಸಿ ಬೆಹರಿನ್ - ಇಂಡಿಯಾ ಅಂತಾರಾಷ್ಟ್ರೀಯ ಪ್ರಶಸ್ತಿ, ಮಲೇಷ್ಯಾ - ಇಂಡಿಯಾ ಐಕಾನಿಕ್ ಅವಾರ್ಡ್ ಸಹಿತ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

ಜೆಇಇ ಮತ್ತು ಸಿಇಟಿಯಲ್ಲಿ ಸಾಧನೆ

ಜೆಇಇ ಅಡ್ವಾನ್ಸ್​ನಲ್ಲಿ ವೀರ ಭದ್ರೇಶ್ ಕಟಗೇರಿ ರಾಷ್ಟ್ರಮಟ್ಟದಲ್ಲಿ 45ನೇ ರ್ಯಾಂಕ್, ಪ್ರಥಮ್ ಎಸ್., 247, ರೋಹಿತ್​ವುಂಜ 1125, ಅಚಿಂತ್ಯ 1542, ಅಂಜನ್ 2810, ಅನುಜ್ 3421ನೇ ರ್ಯಾಂಕ್ ಪಡೆದಿರುವುದು ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ಅಪೂರ್ವ ದಾಖಲೆ. ಸಿಟಿಟಿಯಲ್ಲಿ 1000ದ ಒಳಗಿನ 32 ರ್ಯಾಂಕ್​ಗಳು ಎಕ್ಸೆಲ್​ಗೆ ಬಂದಿರುವುದನ್ನು ಕೂಡ ಗಮನಾರ್ಹ ಅಂಶ ದಶಕಗಳ ಬೋಧನಾ ಅನುಭವವಿರುವ ಪ್ರಾಧ್ಯಾಪಕರು ಈಗ ಎಕ್ಸೆಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಎರಡು ದಶಕಗಳ ಬೋಧನಾ ಅಭವವಿರುವ ಡಾ.ನವೀನ್ ಕುಮಾರ್ ಮರಿಕೆ ಪ್ರಾಂಶುಪಾಲರಾಗಿ, 15 ವರ್ಷಗಳ ಬೋಧನಾನುಭವ ಇರುವ ಡಾ.ಪ್ರಜ್ವಲ್ ಅವರು ಸಂಸ್ಥೆಯ ಅರಮಲೆ ಬೆಟ್ಟ ಕ್ಯಾಂಪಸ್​ನ ಪ್ರಾಂಶುಪಾಲರಾಗಿ ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಂದೆ - ತಾಯಿಯ ಆಶೀರ್ವಾದ

ಸುಮಂತ್ ಕುಮಾರ್ ಅವರು ಯಾವುದೇ ಕಾರ್ಯ ಕೈಗೊಳ್ಳುವುದಿದ್ದರೂ ತಂದೆ, ತಾಯಿಯ ಆಶೀರ್ವಾದ ಪಡೆದೇ ಆರಂಭಿಸುತ್ತಾರೆ. ಸಂಸ್ಥೆಯ ಎಲ್ಲ ಕಟ್ಟಡದ ಶಂಕುಸ್ಥಾಪನೆ ಹೆತ್ತವರಿಂದಲೇ ನೆರವೇರಿಸಿದ್ದಾರೆ. ಒಡಹುಟ್ಟಿದ ತಂಗಿ ಸಹನಾ ಜೈನ್ ಶಿಕ್ಷಣ ಸಂಸ್ಥೆಯ ಪ್ರಗತಿಗೆ ಅಣ್ಣನಿಗೆ ಸಾಥ್ ನೀಡುತ್ತಿದ್ದಾರೆ. ಸಾಮಾನ್ಯ ಹಿನ್ನೆಲೆಯಿಂದ ಬಂದ ಯುವಕನೋರ್ವ ಹೇಗೆ ಸಮಾಜಕ್ಕೆ ಮಾದರಿಯಾಗಬಹುದು ಎನ್ನುವುದಕ್ಕೆ ಸುಮಂತ್ ಕುಮಾರ್ ಆದರ್ಶ ನಿದರ್ಶನವಾಗಿ ನಮ್ಮೊಂದಿಗಿದ್ದಾರೆ.

ಗುರುವಾಯನಕೆರೆ ಎನ್ನುವ ಪುಟ್ಟ ಊರು ಈಗ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರೆ ಅದಕ್ಕೆ ಎಕ್ಸೆಲ್ ಶಿಕ್ಷಣ ಸಂಸ್ಥೆ ಕಾರಣವಾಗಿದೆ. ಈ ಬೃಹತ್ ಶಿಕ್ಷಣ ಸಂಸ್ಥೆಯಲ್ಲಿ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. 200ಕ್ಕೂ ಅಧಿಕ ಉಪನ್ಯಾಸಕರು, 500ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವಿ ಉಪನ್ಯಾಸಕರು ಈಗ ಎಕ್ಸೆಲ್​ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರಾಗುವ, ಇಂಜಿನಿಯರ್ ಆಗುವ, ವಿಜ್ಞಾನಿಯಾಗುವ ಕನಸು ಹೊತ್ತ ವಿದ್ಯಾರ್ಥಿಗಳ ಕನಸಿಗೆ ನೀರೆರೆದು ಪೋಷಿಸುವ ಉಪನ್ಯಾಸಕರು ಇಲ್ಲಿದ್ದಾರೆ. ಸ್ಪಷ್ಟವಾದ ಗುರಿ, ಪ್ರತಿಭೆ, ಪರಿಶ್ರಮ ಮತ್ತು ದೂರದೃಷ್ಟಿತ್ವ ಇದ್ದರೆ ರಾಷ್ಟ್ರಕ್ಕೆ ಯುವಕರು ಎಂತಹ ಕೊಡುಗೆ ನೀಡಬಹುದು ಎನ್ನುವುದಕ್ಕೆ ನಮ್ಮ ಅಧ್ಯಕ್ಷರಾದ ಸುಮಂತ್ ಕುಮಾರ್ ಅವರು ಜ್ವಲಂತ ಸಾಕ್ಷಿಯಾಗಿದ್ದಾರೆ. ಕಿರಿಯ ವಯಸ್ಸಿನಲ್ಲೇ ಅದ್ಭುತ ಸಾಧನೆ ಮೆರೆದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬೃಹತ್ ಸಂಸ್ಥೆಯನ್ನು ಕಟ್ಟಿ ಸುಮಾರು 700 ಮಂದಿಗೆ ಬದುಕು ಕಲ್ಪಿಸಿದ್ದಾರೆ. 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಕನಸು ನನಸಾಗಿಸಲು ಸಹಕಾರಿಯಾಗಿದ್ದಾರೆ. ಅವರ ಪ್ರತಿಭೆ, ಅಚಲವಾದ ಗುರಿ, ವಿದ್ವತ್ ಎಲ್ಲವೂ ಯಶಸ್ವಿಗೆ ಕಾರಣವಾಗಿದೆ. ಪ್ರತಿ ಉಪನ್ಯಾಸಕನ ಜತೆ ಅವರು ಕುಟುಂಬದ ಸದಸ್ಯನ ರೀತಿಯಲ್ಲಿ ಬೆರೆತಿರುವ ಕಾರಣ ಇಲ್ಲಿನ ಉಪನ್ಯಾಸಕರು, ಸಿಬ್ಬಂದಿ ಸಂಸ್ಥೆಯನ್ನು ಬಿಟ್ಟು ಹೋಗುವ ಮಾತೇ ಬರುವುದಿಲ್ಲ. ಇದರಿಂದ ಸಂಸ್ಥೆ ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿ ಸಾಗಿದೆ. |ಡಾ.ನವೀನ್ ಕುಮಾರ್ ಮರಿಕೆ ಪ್ರಾಂಶುಪಾಲರು, ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಸುಮಂತ್ ಸರ್ ಅವರು ಒಂದು ವಿಶಿಷ್ಟವಾದ ವ್ಯಕ್ತಿತ್ವ. ಪ್ರತಿದಿನ ಎಕ್ಸೆಲ್ ಕ್ಯಾಂಪಸ್​ನಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ನಿಭಾಯಿಸುವಾಗ ಬೆಟ್ಟದಷ್ಟು ಸವಾಲುಗಳು ಎದುರಾಗುತ್ತವೆ. ಒಮ್ಮೊಮ್ಮೆ ಸವಾಲುಗಳನ್ನು ಹೇಗೆ ಎದುರಿಸುವುದು ಎನ್ನುವ ಆತಂಕವೂ ಮೂಡುತ್ತದೆ. ಆಗ ಸುಮಂತ್ ಸರ್ ನಮಗೆ ಉತ್ಕೃಷ್ಟ ಮಾರ್ಗದರ್ಶಕರಾಗಿ ಕಾಣುತ್ತಾರೆ. ದೊಡ್ಡ ಸವಾಲುಗಳನ್ನು ಬಹಳ ಸುಲಭವಾಗಿ ಎದುರಿಸುವುದು ಹೇಗೆಂದು ಅವರಿಂದ ಕಲಿಯಬೇಕು. ಅವರಿಗೆ ಅಪ್ರತಿಮವಾದ ಧೈರ್ಯವಿದೆ. ಸವಾಲುಗಳಿಗೆ ಅವರು ಅಂಜುವುದಿಲ್ಲ. ಅವರಿಂದ ನಾವು ದಿನಾ ಕಲಿಯುವ ವಿಷಯಗಳಿರುತ್ತವೆ. ಇಷ್ಟು ದೊಡ್ಡ ಕಾಲೇಜಿನಲ್ಲಿ ಒಳ್ಳೆಯ ಫಲಿತಾಂಶ ಹೇಗೆ ಬರುತ್ತದೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಸಂಸ್ಥೆಯ ಪ್ರತಿ ವಿದ್ಯಾರ್ಥಿಯ ಬಗ್ಗೆ ನಾವು ಗಮನ ಹರಿಸುತ್ತೇವೆ. 15 ದಿವಸಕ್ಕೊಮ್ಮೆ ಪ್ರತಿ ವಿದ್ಯಾರ್ಥಿಗೆ ಕೌನ್ಸಿಲಿಂಗ್ ನಡೆಸುತ್ತೇವೆ. ಅವರಿಗೆ ನೀಡಿದ ಅಸೈನ್​ವೆುಂಟ್​ಗಳನ್ನು ಗಮನಿಸುತ್ತೇವೆ.ಕೌನ್ಸಿಲಿಂಗ್​ನಲ್ಲಿ ಅಕಾಡೆಮಿಕ್ ತಜ್ಞರು, ಮ್ಯಾನೇಜಿಂಗ್ ಸಮಿತಿಯವರು, ಪ್ರಾಂಶುಪಾಲರು ಇರುತ್ತಾರೆ. ಆ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಗಮನಿಸುತ್ತೇವೆ. ವ್ಯವಸ್ಥೆಯಲ್ಲಿ ಏನಾದರೂ ಕೊರತೆ ಇದೆಯಾ ಎಂದು ಪರಿಶೀಲಿಸುತ್ತೇವೆ, ಮಾನಸಿಕ ಒತ್ತಡ ಇದೆಯಾ ಎಂದು ಗಮನಿಸುತ್ತೇವೆ. ಎಲ್ಲವನ್ನೂ ಗಮನಿಸಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತೇವೆ. ಇದರಿಂದ ಎಕ್ಸೆಲ್​ಗೆ ಅದ್ಭುತವಾದ ಫಲಿತಾಂಶ ದಾಖಲಿಸಲು ಸಾಧ್ಯವಾಗಿದೆ. | ಡಾ.ಪ್ರಜ್ವಲ್ ಪ್ರಾಂಶುಪಾಲರು, ಎಕ್ಸೆಲ್ ಪದವಿ ಪೂರ್ವ ಕಾಲೇಜು ಅರಮನೆ ಬೆಟ್ಟ ಕ್ಯಾಂಪಸ್