ನ್ಯೂಸ್

ಫೆ.26ರಿಂದ ಮಾ.5ರವರೆಗೆ ಸುಮನಸಾ ರಂಗಹಬ್ಬ

ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ ಸಹಯೋಗದೊಂದಿಗೆ ಫೆ.26ರಿಂದ ಮಾ.5ರವರೆಗೆ ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ ಅಜ್ಜರಕಾಡು ಭುಜಂಗ ಪಾರ್ಕಿಗೆ ಬಯಲು ರಂಗಮಂದಿರದಲ್ಲಿ ಸಂಘಟಿಸಲಾಗಿದೆ ಎಂದು ಸುಮನಾದ ಗೌರವಾಧ್ಯಕ್ಷ ಎಂ.ಎಸ್.ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.26ರಂದು ಸಾಯಂಕಾಲ 6.30ಕ್ಕೆ ಹಿರಿಯ ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಉದ್ಘಾಟನೆ ನೇರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಕೆ.ರಘುಪತಿ ಭಟ್ ವಹಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಗೋಪಾಲ್ ಬಂಗೇರ, ಉದ್ಯಮಿಗಳಾದ ಆನಂದ್ ಸುವರ್ಣ, ಹರಿಯಪ್ಪ ಕೋಟ್ಯಾನ್, ದಿವಾಕರ ಸನಿಲ್ ಭಾಗವಹಿಸಲಿದ್ದಾರೆ. ಪ್ರತಿದಿನ ಸಾಯಂಕಾಲ 6.30ಕ್ಕೆ ರಂಗಸಾಧಕರಿಗೆ ಸನ್ಮಾನ, ವಿವಿಧ ತಂಡಗಳಿಂದ ರಂಗಪ್ರದರ್ಶನ ನಡೆಯಲಿದೆ.

ಮಾ.5ರಂದು ಸಮಾರೋಪ ಸಮಾರಂಭದಲ್ಲಿ ಜಾನಪದ ಸಂಘಟಕ ಗೋಪಾಲ ಬಂಗೇರ ಅವರಿಗೆ ಜಾನಪದ ಸಂಘಟಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿವಿ ಉಪಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಅಂಬಲಪಾಡಿ ದೇವಸ್ಥಾನ ಧರ್ಮದರ್ಶಿ ವಿಜಯ ಬಲ್ಲಾಳ್, ಮಾಹೆ ಉಪಕುಲಪತಿ ಡಾ. ನಾರಾಯಣ ಸಭಾಹಿತ್, ರವೀಂದ್ರ ಶೆಟ್ಟಿ, ಪ್ರದೀಪ್ ಚಂದ್ರ ಕುತ್ಪಾಡಿ ಭಾಗವಹಿಸಲಿದ್ದಾರೆ ಎಂದರು.
ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಸಂಚಾಲಕ ಭಾಸ್ಕರ ಪಾಲನ್, ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಉಪಸ್ಥಿತರಿದ್ದರು.