ಮಂಡ್ಯ: ಸಕ್ಕರೆ ನಾಡಿನ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಷ್ ಅವರ ಬೆಂಬಲದ ನಿರೀಕ್ಷೆಯಲ್ಲಿದ್ದ ರೈತ ಸಂಘಕ್ಕೆ ಇದೀಗ ಬಹುದೊಡ್ಡ ಶಾಕ್ ಎದುರಾಗಿದೆ. ಲೋಕಸಭಾ ಚುನಾವಣೆಯ ಋಣವನ್ನು ವಿಧಾನಸಭಾ ಚುನಾವಣೆಯಲ್ಲಿ ತೀರಿಸುತ್ತಾರೆ ಎಂಬ ಕನಸಿಗೆ ಸುಮಲತಾ ಅವರು ತಣ್ಣೀರೆರಚಿದ್ದಾರೆ.
ಮೇಲುಕೋಟೆ ಕ್ಷೇತ್ರದಲ್ಲಿ ರೈತಸಂಘಕ್ಕೆ ಬೆಂಬಲ ನೀಡುವುದಾಗಿ ಸುಮಲತಾ ಅಂಬರೀಷ್ ಈ ಹಿಂದೆ ಮಾತು ಕೊಟ್ಟಿದ್ದರು. ನಿನ್ನೆಯಷ್ಟೇ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಬಿಜೆಪಿಗೆ ಸಂಪೂರ್ಣ ಬೆಂಬಲ ಘೋಷಣೆ ಮಾಡಿದ್ದಾರೆ. ಈ ಮೂಲಕ ಕೊಟ್ಟ ಮಾತಿಗೆ ಸಮಲತಾ ಅವರು ತಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ರೈತ ಸಂಘದ ನಾಯಕ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ನಡೆಸುವುದಾಗಿ ಮಾತುಕೊಟ್ಟು ಈಗ ಉಲ್ಟಾ ಹೊಡೆದಿದ್ದಾರೆ ಎನ್ನಲಾಗಿದೆ. ತಮ್ಮ ಗೆಲುವಿಗೆ ಶ್ರಮಿಸಿದ್ದ ರೈತ ಸಂಘದ ಪರ ಪ್ರಚಾರ ಮಾಡುವುದಾಗಿ ಹೇಳಿದ್ದರು. ಈಗ ರೈತ ಸಂಘಕ್ಕೆ ಬೆಂಬಲ ನೀಡುವ ಬಗ್ಗೆ ಬಿಜೆಪಿ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.
ಸುಮಲತಾ ನಡೆ ವಿರುದ್ಧ ರೈತ ಸಂಘದ ಹಲವು ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ. ಮೇಲುಕೋಟೆ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಡಾ.ಇಂದ್ರೇಶ್ ಪರ ಸುಮಲತಾ ಪ್ರಚಾರ ಮಾಡುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ರಾಜಕೀಯದಲ್ಲಿ ಹಳೆಯ ಮಾತುಗಳು ಅಪ್ರಸ್ತುತ ಎಂದು ಇಂದ್ರೇಶ್ ಹೇಳಿದ್ದಾರೆ.
ಬಿಜೆಪಿ ಸೇರಿದ್ರೆ ಸುಮಲತಾ ವಿರುದ್ಧ ಚುನಾವಣೆ ನಡೆಸುವುದಾಗಿ ಹೇಳಿದ್ದ ರೈತ ಸಂಘದ ನಾಯಕರು. ಇದೀಗ ಬಿಜೆಪಿಗೆ ಸಂಪೂರ್ಣ ಬೆಂಬಲ ಘೋಷಿಸಿ ರೈತ ಸಂಘಕ್ಕೆ ಸುಮಲತಾ ಕೈ ಕೊಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್)