ಚಾಮರಾಜನಗರ: ತಾಲೂಕಿನ ಹೆಗ್ಗೋಠಾರದಲ್ಲಿ ಮದ್ಯ ಸಿಗದೆ ಮನನೊಂದು ಕುಡುಕನೊಬ್ಬ ಆತ್ಯಹತ್ಯೆಗೆ ಶರಣಾಗಿದ್ದಾನೆ.
ಗ್ರಾಮದ ನಾಗರಾಜು (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೂಲತಃ ನಂಜನಗೂಡಿನ ಕಿರಗುಂದ ಗ್ರಾಮದ ನಾಗರಾಜು ಹೆಗ್ಗೋಠಾರದ ನಿರ್ಮಲಾ ಅವರನ್ನು 15 ವರ್ಷಗಳ ಹಿಂದೆ ವಿವಾಹವಾಗಿ ಗ್ರಾಮದಲ್ಲೇ ನೆಲೆಸಿದ್ದ. ಕುಡಿಯುವ ಚಟವಿದ್ದ ನಾಗರಾಜು ಕಳೆದ 35 ದಿನಗಳಿಂದ ಮದ್ಯಪಾನಕ್ಕಾಗಿ ಚಡಪಡಿಸುತ್ತಿದ್ದ. ಈ ಬಗ್ಗೆ ಪತ್ನಿಯೊಂದಿಗೆ ಹೇಳಿಕೊಂಡಿದ್ದ.
ಏ.30ರಂದು ರಾತ್ರಿ 9 ಗಂಟೆ ಸಮಯದಲ್ಲಿ ತಮ್ಮ ಹೊಸಮನೆಗೆ ಹೋಗಿ ಮಲಗುತ್ತೇನೆಂದು ಹೇಳಿ ಹೋಗಿದ್ದ ನಾಗರಾಜು ಅನ್ನು ಬೆಳಗ್ಗೆ ನೋಡಲೆಂದು ಪತ್ನಿ ನಿರ್ಮಲಾ ಹೋದಾಗ ಹೊಸಮನೆಯ ಬಾತ್‌ರೂಂನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನನ್ನ ಗಂಡ ಕುಡಿಯಲು ಮದ್ಯ ಸಿಗದೆ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಇವರ ಸಾವಿನಲ್ಲಿ ಬೇರೆ ಕಾರಣವಿಲ್ಲ ಎಂದು ಪತ್ನಿ ನಿರ್ಮಲಾ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಲಿಖಿತ ಹೇಳಿಕೆ ನೀಡಿದ್ದಾರೆ.
ಈ ನಡುವೆ, ಶುಕ್ರವಾರ ಕೇಂದ್ರ ಗೃಹ ಸಚಿವಾಲಯ ಮೂರನೇ ಹಂತದ ಲಾಕ್‌ಡೌನ್ ನಿಯಮಾವಳಿ ಬಿಡುಗಡೆ ಮಾಡಿದ್ದು, ಹಸಿರು ವಲಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ.