ನ್ಯೂಸ್

Pakistan ಶಾಲಾ ಬಸ್​ ಮೇಲೆ ಆತ್ಮಾಹುತಿ ಬಾಂಬ್ ದಾಳಿ, ನಾಲ್ವರು ಮಕ್ಕಳು ಸಜೀವ ದಹನ, 38 ಮಂದಿಗೆ ಗಾಯ

Pakistan : ಶಾಲಾ ಬಸ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ನಾಲ್ವರು ಮಕ್ಕಳು ಸಾವನ್ನಪ್ಪಿ, 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಖುಜ್ದಾರ್ ಜಿಲ್ಲೆಯಲ್ಲಿ ನಡೆದಿದೆ.

ಶಾಲಾ ಬಸ್​ಗೆ ಬಾಂಬ್​ ಇರಿಸಿದ್ದ ಕಾರು ಬಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಕ್ಕಳು ಸಜೀವ ದಹನವಾಗಿದ್ದಾರೆ. 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಸ್ಥಳೀಯ ಉಪ ಆಯುಕ್ತ ಯಾಸಿರ್ ಇಕ್ಬಾಲ್ ತಿಳಿಸಿದ್ದಾರೆ.

ಯಾವುದೇ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ, ಆದರೆ ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಲೇ ಇರುತ್ತದೆ ಹೀಗಾಗಿ ಅನುಮಾನವು ಬಲೂಚ್ ಪ್ರತ್ಯೇಕವಾದಿಗಳ ಕಡೆಗೆ ಮೂಡುವುದು ಸಹಜವಾಗಿದೆ.

"ಶತ್ರುಗಳು ಮುಗ್ಧ ಮಕ್ಕಳನ್ನು ಗುರಿಯಾಗಿಸಿಕೊಂಡು ಸಂಪೂರ್ಣ ಅನಾಗರಿಕತೆಯನ್ನು ಎಸಗಿದ್ದಾರೆ. ಅಂತಹ ಮೃಗಗಳು ಯಾವುದೇ ದಯೆಗೆ ಅರ್ಹರಲ್ಲ" ಎಂದು ಆಂತರಿಕ ಸಚಿವ ಮೊಕ್ಸಿನ್ ನಖಿ ದಾಳಿಯನ್ನು ತೀವ್ರವಾಗಿ ಖಂಡಿಸಿದರು.

ಬುಧವಾರದ ಬಾಂಬ್ ದಾಳಿಯು ಬಲೂಚಿಸ್ತಾನದ ಕಿಲ್ಲಾ ಅಬ್ದುಲ್ಲಾ ಮಾರುಕಟ್ಟೆಯ ಬಳಿ ಇದೇ ರೀತಿಯ ಕಾರು ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ ಕೆಲವೇ ದಿನಗಳ ನಂತರ ನಡೆದಿದೆ. (ಏಜೆನ್ಸೀಸ್​)