ನ್ಯೂಸ್

ಪಾಕಿಸ್ತಾನ ಸೇನಾ ನೆಲೆ ಮೇಲೆ ಆತ್ಮಾಹುತಿ ದಾಳಿ: 23 ಸಾವು

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಭಯೋತ್ಪಾದಕರು ಮತ್ತೊಮ್ಮೆ ಹಿಂಸಾಚಾರಕ್ಕೆ ಇಳಿದಿದ್ದಾರೆ. ಈ ಬಾರಿ ಸೇನೆಯ ವಿರುದ್ಧ ಆತ್ಮಾಹುತಿ ದಾಳಿ ನಡೆದಿದ್ದು, ಸುಮಾರು 23 ಮಂದಿ ಮೃತಪಟ್ಟಿದ್ದಾರೆ.

ಮಂಗಳವಾರ ಮುಂಜಾನೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ದೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಸೇನಾ ನೆಲೆಯ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಆತ್ಮಹತ್ಯಾ ಬಾಂಬರ್‌ಗಳು ಭದ್ರತಾ ಆವರಣಕ್ಕೆ ನುಗ್ಗಿ ದಾಳಿ ನಡೆಸಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಬುಡಕಟ್ಟು ಪ್ರದೇಶಗಳ ಬಳಿ ನಡೆದ ದಾಳಿಯ ಹೊಣೆಯನ್ನು ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ (ಟಿಜೆಪಿ) ಹೊತ್ತುಕೊಂಡಿದೆ.

ತೆಹ್ರೀಕ್- ಇ- ಜಿಹಾದ್ ಪಾಕಿಸ್ತಾನ್ ಉಗ್ರ ಸಂಘಟನೆಯು ಪಾಕಿಸ್ತಾನದಲ್ಲಿ ದೊಡ್ಡ ಮಟ್ಟದ ದಾಳಿಗಳನ್ನು ನಡೆಸುತ್ತಿದೆ. ಜುಲೈನಲ್ಲಿ ಬಲೂಚಿಸ್ತಾನ ಪ್ರಾಂತ್ಯದಲ್ಲಿನ ಪಾಕಿಸ್ತಾನ ಸೇನಾ ನೆಲೆ ಮೇಲೆ ದಾಳಿ ನಡೆಸಿ, 12 ಸೈನಿಕರನ್ನು ಹತ್ಯೆ ಮಾಡಿತ್ತು.