ಕೊಲೆ ಗೀಡಾದ ವ್ಯಕ್ತಿ ಸುಹಾಸ್ ಶೆಟ್ಟಿ ರೌಡಿಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಎಡಿಜಿಪಿ (ಕಾನೂನು ಸುವ್ಯವಸ್ಥೆ) ವರೊಂದಿಗೆ ಮಾತನಾಡಿ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲು ಸೂಚಿಸಿದೆ ಎಂದು ಸಿಎಂ(CM) ಸಿದ್ದರಾಮಯ್ಯ ತಿಳಿಸಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ತೂಬಿನಕೆರೆ ಹೆಲಿಫ್ಯಾಡ್ ನಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದರು. ಮನುಷ್ಯನ ಪ್ರಾಣ ಬಹಳ ಮುಖ್ಯ. ಕೂಡಲೇ ಅಪರಾಧಿಗಳು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.
ಪೆಹಲ್ಗಾಮ್ಗೆ ಪ್ರಧಾನಿ ಮೋದಿ ಏಕೆ ಭೇಟಿ ನೀಡಲಿಲ್ಲ?
ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯಾದ ಸ್ಥಳಕ್ಕೆ ಬಿಜೆಪಿಯವರು ಭೇಟಿ ನೀಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಬಿಜೆಪಿಯವರು ಯಾವಾಗಲೂ ರಾಜಕೀಯವಾಗಿ ಇಂಥ ಪ್ರಕ್ರಣಗಳನ್ನೇ ಹುಡುಕುತ್ತಾರೆ. ಒಂದು ವಾರದಿಂದ ಪೆಹಲ್ಗಾಮ್ ಪ್ರಕರಣದ ಬಗ್ಗೆ ಏನು ಹೇಳುತ್ತಾರೆ. ಉಗ್ರರ ದಾಳಿಗೆ 26 ಜನ ಸಾವನ್ನಪ್ಪಿದ್ದಾರೆ. ಪ್ರಧಾನಿಗಳು ಅಲ್ಲಿಗೆ ಭೇಟಿ ನೀಡಿದ್ದಾರೆಯೇ? ಬಿಜೆಪಿಯವರಿಗೆ ಪ್ರಧಾನಿ ಮೋದಿಯವರಿಗೆ ಇದು ಮುಖ್ಯ ಅನ್ನಿಸುತ್ತಿಲ್ಲವೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಇದನ್ನೂ ಓದಿ:ಇವರೇ ನೋಡಿ 625ಕ್ಕೆ 625 ಅಂಕ ಪಡೆದ 22 ವಿದ್ಯಾರ್ಥಿಗಳು; ಇಲ್ಲಿದೆ ಸಂಪೂರ್ಣ ವಿವರ | Karnataka SSLC Result 2025
ಪಹಲ್ಗಾಮ್ ಪ್ರಕರಣ ಭದ್ರತಾ ವೈಫಲ್ಯ ಕಾರಣ
ಪಹಲ್ಗಾಮ್ ಪ್ರಕರಣ ಭದ್ರತಾ ವೈಫಲ್ಯವಲ್ಲವೇ? ಎಂದು ಪ್ರಶ್ನಿಸಿದ ಸಿಎಂ, ಕಾಶ್ಮೀರದಲ್ಲಿ ಒಬ್ಬ ಪೋಲಿಸ್ ಆಗಲಿ, ಭದ್ರತಾ ಪಡೆಯವರಾಗಲಿ ನಿಯೋಜಿಸಿಲ್ಲ. ಯಾರೂ ಇಲ್ಲ ಎಂದರೆ ಏನು ಅರ್ಥ? ನೂರಾರು ಪ್ರವಾಸಿಗರು ಭೇಟಿ ನೀಡುವ ಸ್ಥಳದಲ್ಲಿ ಪೊಲೀಸರು ಇರಬೇಕು ಎಂದರು.
ನನಗೂ ಬೆದರಿಕೆ ಕರೆ ಬಂದಿದೆ
ವಿಧಾನಸಭಾಧ್ಯಕ್ಷ ಯು.ಟಿ .ಖಾದರ್ ಅವರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ನನಗೂ ಬೆದರಿಕೆ ಕರೆಗಳು ಬರುತ್ತವೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿ, ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.