ನವದೆಹಲಿ: ಭಾರತೀಯ ರೈಲ್ವೇ ಜಾಲವು ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ನಿತ್ಯ ಸಾವಿರಾರು ರೈಲುಗಳಲ್ಲಿ ಕೋಟಿಗಟ್ಟಲೆ ಜನ ಪ್ರಯಾಣಿಸುತ್ತಾರೆ. ಅಂದಹಾಗೆ ಎಂದಿನಂತೆ ಪ್ರಯಾಣಿಕರು ಶುಕ್ರವಾರವೂ ದೆಹಲಿಯ ಆನಂದ್ ವಿಹಾರ್‌ನಿಂದ ಯುಪಿಯ ಗಾಜಿಪುರಕ್ಕೆ ತೆರಳುವ ಸುಹೈಲ್‌ದೇವ್ ಸೂಪರ್‌ಫಾಸ್ಟ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣ ಆರಂಭಿಸಿದ ಬಳಿಕ ರೈಲಿನ ಎರಡು ಬೋಗಿಗಳ ಪ್ರಯಾಣಿಕರು ಮಾತ್ರ ತೀವ್ರವಾಗಿ ಆಕ್ರೋಶಗೊಂಡ ಘಟನೆ ನಡೆದಿದೆ.
ಘಟನೆಯ ವಿವರ
ಸುಹೈಲ್‌ದೇವ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಆನಂದ್ ವಿಹಾರ್ ಟರ್ಮಿನಲ್‌ನಿಂದ ಹೊರಟಾಗ, ಸ್ವಲ್ಪ ಸಮಯದ ನಂತರ ರೈಲಿನ B-1 ಮತ್ತು B-2 ಎರಡೂ ಕೋಚ್‌ಗಳು ವಿದ್ಯುತ್ ವ್ಯತ್ಯಯವಾಗಿ ಲೈಟ್ ಆಫ್ ಆದವು. ಎಸಿಯೂ ನಿಂತಿತು. ಬಿಸಿಲಿನ ಜಳಕ್ಕೆ ಕೋಚ್‌ನಲ್ಲಿದ್ದ ಮಕ್ಕಳು, ಮಹಿಳೆಯರ ಸ್ಥಿತಿಯೂ ಹದಗೆಟ್ಟಿತ್ತು. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೊದಲಿಗೆ ರೈಲಿನಲ್ಲಿ ವಿದ್ಯುತ್ ಕಡಿತದ ಬಗ್ಗೆ ಟಿಟಿಇ ಬಳಿ ಕೇಳಿದಾಗ ಸಮಾಧಾನಕರ ಉತ್ತರ ಸಿಗಲಿಲ್ಲ. ಆಗ ಪ್ರಯಾಣಿಕರು ಗಲಿಬಿಲಿಗೊಂಡು ಟಿಟಿಇಯನ್ನು ಕೋಚ್‌ನ ಶೌಚಾಲಯದಲ್ಲಿ ಕೂಡಿ ಹಾಕಿ ಗಲಾಟೆ ಮಾಡಿದರು.
ರೈಲ್ವೆ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸ್ ಪಡೆ ಕೂಡ ಸ್ಥಳಕ್ಕೆ ಆಗಮಿಸಿ ಸಮಾಧಾನಪಡಿಸಲು ಯತ್ನಿಸಿದ್ದಾರೆ. ತಡರಾತ್ರಿ ವಿಷಯ ಬಿಗಡಾಯಿಸಿದಾಗ ರೈಲ್ವೇ ಅಧಿಕಾರಿಗಳು ಅದನ್ನು ಅರಿತು ರೈಲಿನ ಎರಡು ಬೋಗಿಗಳಲ್ಲಿ ವಿದ್ಯುತ್ ಕಡಿತವನ್ನು ತಕ್ಷಣ ಸರಿಪಡಿಸುವಂತೆ ನೌಕರರಿಗೆ ಸೂಚಿಸಿದ್ದಾರೆ.
ತುಂಡ್ಲಾ ರೈಲು ನಿಲ್ದಾಣದಲ್ಲಿ ನಿಂತ ರೈಲು
ತುಂಡ್ಲಾ ರೈಲು ನಿಲ್ದಾಣದಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ರೈಲು ನಿಂತಿದ್ದು, ಇಂಜಿನಿಯರ್‌ಗಳ ತಂಡ ರೈಲಿನ ಕೋಚ್‌ನಲ್ಲಿ ವಿದ್ಯುತ್ ಕಡಿತಕ್ಕೆ ಕಾರಣವೇನು ಎಂದು ತನಿಖೆ ಆರಂಭಿಸಿದೆ. ಸ್ವಲ್ಪ ಸಮಯದ ನಂತರ ಬಿ1 ಕೋಚ್‌ನಲ್ಲಿ ವಿದ್ಯುತ್ ಕಡಿತದ ಸಮಸ್ಯೆ ಬಗೆಹರಿಯಿತು. ಆ ನಂತರ ಮತ್ತೆ ಬಿ 2 ಕೋಚ್‌ನಲ್ಲಿ ವಿದ್ಯುತ್ ಬಂದು ರೈಲು ಹೊರಟಿದೆ.
ರೈಲಿನಲ್ಲಿದ್ದ ಪ್ರಯಾಣಿಕರು ಸುಹೈಲ್‌ದೇವ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿನ ಈ ನ್ಯೂನತೆ ಮತ್ತು ಅದರಿಂದಾಗುವ ತೊಂದರೆಗಳ ಬಗ್ಗೆ ಟ್ವೀಟ್ ಮಾಡುವ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿದ್ದಾರೆ. ಮಾಹಿತಿ ಪ್ರಕಾರ, ವಿದ್ಯುತ್ ಕಡಿತ ಸರಿಪಡಿಸಲು ರೈಲು ತುಂಡ್ಲಾ ರೈಲು ನಿಲ್ದಾಣದಲ್ಲಿ 2 ಗಂಟೆಗೂ ಹೆಚ್ಚು ಕಾಲ ನಿಂತಿತ್ತು. ಈಗಾಗಲೇ ತಡವಾಗಿ ಓಡುತ್ತಿದ್ದ ರೈಲು ವಿದ್ಯುತ್ ವ್ಯತ್ಯಯವನ್ನು ಸರಿಪಡಿಸಿದ್ದರಿಂದ ಇನ್ನಷ್ಟು ವಿಳಂಬವಾಯಿತು.