ಮೈಸೂರು: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಜು.16 ರಂದು ಬೆಳಗ್ಗ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.
ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್‌ಗೆ 4,000 ರೂ. ಅಡ್ವಾನ್ಸ್ ನೀಡಬೇಕು ಹಾಗೂ ಕಳೆದ ಬಾರಿಯ ಲಾಭಾಂಶ ಪ್ರತಿ ಟನ್‌ಗೆ 150 ರೂ.ಗಳನ್ನು ನೀಡಬೇಕು. ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರ ನಿಗದಿ ಪಡಿಸುವ ಸಂದರ್ಭ ಇಳುವರಿ ಪ್ರತಿ ಟನ್ ಕಬ್ಬಿಗೆ ಶೇ.10.5ಕ್ಕೆ ಏರಿಕೆ ಮಾಡಿ 3,400 ರೂ. ನಿಗದಿ ಮಾಡಿರುವುದು ರೈತರಿಗೆ ಮಾಡಿದ ದ್ರೋಹವಾಗಿದ್ದು, ಈ ಇಳುವರಿ ಪ್ರಮಾಣವನ್ನು ಶೇ.8.5ಕ್ಕೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಕಳೆದ ಬಾರಿ ಕಬಿನಿ ಅಚ್ಚುಕಟ್ಟು ಪ್ರದೇಶದಿಂದ ಕೃಷಿ ಚಟುವಟಿಕೆಗಳಿಗೆ ನೀರು ಹರಿಸದ ಹಿನ್ನೆಲೆಯಲ್ಲಿ ರೈತಾಪಿ ವರ್ಗದವರು ತೀವ್ರ ಸಂಕಷ್ಟಕ್ಕೆ ಗುರಿಯಾದರು. ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಕೃಷಿ ಚಟುವಟಿಕೆಗೆ ನೀರು ಹರಿಸಬೇಕು. ಈ ವಿಚಾರದಲ್ಲಿ ಯಾವುದೇ ಷರತ್ತುಗಳನ್ನು ವಿಧಿಸಬಾರದು ಎಂದು ಆಗ್ರಹಿಸಿದರು.
ಹೊಸ ಕೃಷಿ ಪಂಪ್ ಸೆಟ್‌ಗಳಿಗೆ ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು, ಕರ್ನಾಟಕ ಗ್ರಾಮೀಣ ಬ್ಯಾಂಕ್ ರೈತರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದು, ಒಟಿಎಸ್ ಮೂಲಕ ಸಾಲವನ್ನು ತೀರಿಸಿಕೊಳ್ಳುತ್ತಿಲ್ಲ. ಅಲ್ಲದೆ, ಹೊಸ ಸಾಲವನ್ನು ಸಹ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.