ನ್ಯೂಸ್

ಕಬ್ಬು ಅರೆಯುವಿಕೆ ಅ.25ರಿಂದ ಶುರು; ಸಚಿವ ಶಿವಾನಂದ ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಋತುವಿನ ಕಬ್ಬು ಅರೆಯುವಿಕೆಯನ್ನು ಸಕ್ಕರೆಗಳ ಕಾರ್ಖಾನೆಗಳು ಒಂದು ವಾರ ಮುಂಚಿತವೆಂದರೆ, ಅ.25ರಿಂದಲೇ ಶುರು ಮಾಡಲಿವೆ ಎಂದು ಸಕ್ಕರೆ, ಜವಳಿ ಸಚಿವ ಶಿವಾನಂದ ಪಾಟೀಲ್ ಮಾಹಿತಿ ನೀಡಿದರು.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಕಕಾಲಕ್ಕೆ ನವೆಂಬರ್ ಒಂದರಿಂದ ಕಬ್ಬು ಅರೆಯಲು ಆರಂಭಿಸಬೇಕು ಎಂದು ಸಕ್ಕರೆ ಕಾರ್ಖಾನೆಗಳಿಗೆ ಈ ಹಿಂದೆ ಸೂಚನೆ ನೀಡಲಾಗಿತ್ತು.

ಕಬ್ಬು 11 ರಿಂದ 12 ತಿಂಗಳಿಗೆ ಕಟಾವು ಮಾಡಿದರೆ ಸಕ್ಕರೆ ಇಳುವರಿ ಉತ್ತಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನವೆಂಬರ್ 1ರಿಂದ ಏಕಕಾಲದಲ್ಲಿ ಆರಂಭಿಸಲು ಸೂಚಿಸಲಾಗಿತ್ತು. ಆದರೆ ಬರಗಾಲ, ವಿದ್ಯುತ್ ಅಭಾವದ ಕಾರಣ ಸಿಎಂ ನೀಡಿದ ಸೂಚನೆಯಂತೆ ಒಂದು ವಾರ ಮುಂಚಿತವಾಗಿ ಕಬ್ಬು ಅರೆಯುವಿಕೆ ಶುರು ಮಾಡಲು ತಿಳಿಸಲಾಗಿದೆ ಎಂದರು.

ಸದ್ಯಕ್ಕೆ 3.50 ರಿಂದ ನಾಲ್ಕು ಲಕ್ಷ ಹೆಕ್ಟೇರ್‌ನಲ್ಲಿ 11 ರಿಂದ 12 ತಿಂಗಳು ತುಂಬಿದ ಕಬ್ಬು ಇಳುವರಿಯಿದೆ. ಮುಂಚಿತವಾಗಿ ಕಬ್ಬು ಅರಿಯುವಿಕೆಯಿಂದ ಉಳಿದ ಪ್ರದೇಶದ ಕಬ್ಬಿನಲ್ಲಿ ಇಳುವರಿ ಕಡಿಮೆಯಾಗುವುದು ಸಹಜ.

ಮಳೆ ಕೈಕೊಟ್ಟಿದ್ದರಿಂದ ಒಂದು ಲಕ್ಷ ಹೆಕ್ಟೇರ್ ಪ್ರದೇಶದ ಕಬ್ಬು ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಸಕ್ಕರೆ ಇಳುವರಿ ಹಾಗೂ ಉತ್ಪಾದನೆ ಕಡಿಮೆಯಾಗಲಿದೆ. ಕಳೆದ ಬಾರಿ 74 ಸಕ್ಕರೆ ಕಾರ್ಖಾನೆಗಳು ಕಬ್ಬು ಅರಿದಿದ್ದರೆ ಈ ಬಾರಿ 77 ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯಲಿವೆ. ಒಟ್ಟು 1,800 ಮೆ.ವಾ. ಕೋಜನ್ ವಿದ್ಯುತ್ ಲಭಿಸುವ ನಿರೀಕ್ಷೆಯಿದೆ ಎಂದು ಶಿವಾನಂದ ಪಾಟೀಲ್
ತಿಳಿಸಿದರು.

ಸಕ್ಕರೆ ಉತ್ಪಾದನೆ ಕುಸಿತ ಸಂಭವ

ಕಬ್ಬು ಬೆಳೆಗಾರರ ಸಕ್ಕರೆ ಕಾರ್ಖಾನೆಗಳಿಂದ ಎ್ಆರ್‌ಪಿಗಿಂತ ಹೆಚ್ಚಿನ ದರದ ಮೊತ್ತವನ್ನು ಪಾವತಿಯಾಗಿದೆ. ಕಳೆದ ಬಾರಿ 19.74 ಸಾವಿರ ಕೋಟಿ ರೂ.ಗಳಾಗಿದ್ದರೆ, ಈ ಬಾರಿ 20 ಸಾವಿರ ಕೋಟಿ ರೂ.ಗಳಾಗಿದೆ. ಬಸವೇಶ್ವರ ಸಕ್ಕರೆ ಕಾರ್ಖಾನೆಯ ಯಂತ್ರೋಪಕರಣವನ್ನು ಜಪ್ತಿ ಮಾಡಿ ಬಾಕಿ 28 ಕೋಟಿ ರೂ. ರೈತರಿಗೆ ಪಾವತಿಸಲಾಗಿದೆ.

ಸಕ್ಕರೆ ರ್ತು ನಿಷೇಧದಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತಿಲ್ಲ. ಉತ್ಪಾದನೆ ಕಡಿಮೆಯಾದ ಕಾರಣಕ್ಕೆ ಸಕ್ಕರೆ ಬೆಲೆ ಏರಿಕೆಯಾಗುತ್ತಿದೆ. ಎಥನಾಲ್ ಉತ್ಪಾದನೆ ಹೆಚ್ಚಿದಷ್ಟು ಸಕ್ಕರೆ ಉತ್ಪಾದನೆ ಕುಸಿದು, ಬೆಲೆ ಹೆಚ್ಚಳ ಮತ್ತು ತೆರಿಗೆ ಸಂಗ್ರಹ ಕಡಿಮೆಯಾಗಲಿದೆ ಎಂದು ಶಿವಾನಂದ ಪಾಟೀಲ್ ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಳೆದ ಬಾರಿ 35 ಸಾವಿರ ಕೋಟಿ ಲೀಟರ್ ಎಥನಾಲ್ ಉತ್ಪಾದನೆಯಾಗಿತ್ತು. ಈ ಬಾರಿ 40 ಸಾವಿರ ಕೋಟಿ ಲೀಟರ್ ಆಗಬಹುದು. ಎಥನಾಲ್ ಉತ್ಪನ್ನದ ಲಾಭಾಂಶದಲ್ಲಿ ರೈತರಿಗೂ ಪಾಲು ಕೊಡಿಸುವುದಕ್ಕೆ ಪ್ರಯತ್ನಿಸಲಾಗುವುದು ಎಂಬ ಭರವಸೆ ನೀಡಿದರು.

ವಿದ್ಯುನ್ಮಾನ ಮಾಪನ ಯಂತ್ರ

ಸಕ್ಕರೆ ಕಾರ್ಖಾನೆಗಳ ಕಡಿಮೆ ತೂಕದ ಬಗ್ಗೆ ರೈತರು ಲಿಖಿತವಾಗಿ ದೂರು ಸಲ್ಲಿಸಿದರೆ, ದಿಢೀರ್ ದಾಳಿ ನಡೆಸಿ ಪರಿಶೀಲಿಸಲು ಜಾಗೃತದಳ ರಚಿಸಲಾಗಿದೆ. ಎಲ್ಲ ಸಕ್ಕರೆ ಕಾರ್ಖಾನೆಗಳು ವಿದ್ಯುನ್ಮಾನ ಮಾಪನ ಯಂತ್ರ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗುವುದು.

ಸಕ್ಕರೆ ಕಾರ್ಖಾನೆ ನಿಯಂತ್ರಣ ಕಾಯ್ದೆ ರಚನೆಗೆ ಚಿಂತನೆ ನಡೆದಿದ್ದು, ಮಹಾರಾಷ್ಟ್ರ ಮಾದರಿ ಅಧ್ಯಯನ ಮಾಡಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳ ನಡುವಿನ ಅಂತರ 15 ಕಿ.ಮೀ.ನಿಂದ 25 ಕಿ.ಮೀ.ಗೆ ನಿಗದಿಪಡಿಸುವ ವಿಚಾರ ಕೈಬಿಡಲಾಗಿದೆ.

ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಅವ್ಯವಹಾರದ ಬಗ್ಗೆ ಲೋಕಾಯುಕ್ತ ತನಿಖೆಯಾಗಿದ್ದು, ಈ ವರದಿ ಆಧಾರದ ಮೇಲೆ ಮೇಲ್ಮನವಿ ಸಲ್ಲಿಸಬೇಕಾಗಿದೆ. ಇದಕ್ಕಾಗಿ ಒಂದು ಕೋಟಿ ರೂ. ತುಂಬಲು ಕ್ರಮಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಕಾರ್ಖಾನೆಯಲ್ಲಿ ಎರಡು ಲಕ್ಷ ಟನ್ ಕಬ್ಬು ಅರೆಯಲಾಗಿದ್ದು, ಶೇ.7.50ರಷ್ಟು ಇಳುವರಿ ಬಂದಿದೆ ಎಂದು ಶಿವಾನಂದ ಪಾಟೀಲ್ ಹೇಳಿದರು.