ನ್ಯೂಸ್

ಸಕ್ಕರೆ ಉದ್ಯಮಕ್ಕೆ ಸರ್ಕಾರ ಸಾಥ್: ಸಚಿವ ನಿರಾಣಿ ಹೇಳಿಕೆ

Ramanagara

ಬಿಡದಿ:  ದೇಶದಲ್ಲಿ 12 ಕೋಟಿಗಿಂತ ಹೆಚ್ಚಿನ ಜನರು ಸಕ್ಕರೆ ಉದ್ಯಮಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ತಿಳಿಸಿದರು.

ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ದಕ್ಷಿಣ ಭಾರತದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ತಂತ್ರಜ್ಞರ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಶುಕ್ರವಾರ ಮಾತನಾಡಿದರು.

ಭಾರತದಲ್ಲಿ 800ಕ್ಕೂ ಹೆಚ್ಚು ಮತ್ತು ರಾಜ್ಯದಲ್ಲಿ 84 ಸಕ್ಕರೆ ಕಾರ್ಖಾನೆಗಳಿದ್ದು, ಕರ್ನಾಟಕದಲ್ಲಿ 20 ಕಾರ್ಖಾನೆಗಳು ವಿವಿಧ ಕಾರಣಗಳಿಂದ ನಿಷ್ಕ್ರಿಯವಾಗಿವೆ. ಈ ಉದ್ಯಮದ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ಎಲ್ಲ ಸಹಕಾರ ನೀಡುತ್ತಿದೆ ಎಂದರು.

ದೇಶದಲ್ಲಿ ಕಳೆದ 70 ವರ್ಷಗಳಿಂದ ಇದುವರೆಗೆ 0.48% ಜಮೀನು 88 ಸಾವಿರ ಎಕರೆ ಮಾತ್ರ ಕೈಗಾರಿಕೆಗಾಗಿ ಭೂ ಸ್ವಾಧೀನ ಮಾಡಿದ್ದೇವೆ. ಒಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ಪಾರ್ಕ್ ಬರಬೇಕೆಂದು ಭೂಸ್ವಾಧೀನ ಮಾಡಲಾಗುತ್ತಿದೆ. ದೇಶದಲ್ಲಿ ಅತೀ ಹೆಚ್ಚು ಬಂಡವಾಳಗಾರರನ್ನು ಕರ್ನಾಟಕ ಆಕರ್ಷಿಸಲಿದೆ ಎಂದು ನಿರಾಣಿ ತಿಳಿಸಿದರು.

ಮಾಗಡಿ ಶಾಸಕ ಎ.ಮಂಜುನಾಥ್, ದಕ್ಷಿಣ ಭಾರತದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ತಂತ್ರಜ್ಜರ ಸಂಸ್ಥೆಯ ಅಧ್ಯಕ್ಷ ಎ.ಸಿ.ಪಾಟೀಲ್, ಉಪಾಧ್ಯಕ್ಷ ಅರ್.ವಿ.ಕುಮಾರ್, ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆ ನಿರ್ದೇಶಕ ಅರ್.ಬಿ.ಕಾಂಡಗಾವೆ, ತೈಸೇನಾಕುಪ್ಪ ಕಾರ್ಖಾನೆ ಸಿಇಒ ವಿವೇಕ್‌ಬೈತ್ಯಿ, ಆಂದ್ರಪ್ರದೇಶದ ಕಬ್ಬು ಮತ್ತು ಸಕ್ಕರೆ ನಿರ್ದೇಶಕ ವಿ.ವೆಂಕಟರಾವ್, ನಟೀಮ್ಸ್ ಸಕ್ಕರೆ ಕಾರ್ಖಾನೆ ಚೇರ್‌ಮನ್ ನಂದಕುಮಾರ್, ಶಿಲ್ಪ ಮತ್ತಿತರರು ಇದ್ದರು.

ಮಾಗಡಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ :  ಮಾಗಡಿಯಲ್ಲಿ ಕೈಗಾರಿಕಾ ಪ್ರದೇಶವನ್ನು ಗುರ್ತಿಸಲಾಗುತ್ತಿದ್ದು, ಕೈಗಾರಿಕೆಗಳ ಆರಂಭದಿಂದ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗಲಿದೆ. ಬೆಂಗಳೂರಿಗೆ ಹತ್ತಿರದಲ್ಲಿರುವ ಮಾಗಡಿ ಸಹ ಪ್ರಗತಿ ಆಗಲಿದೆ. ರೈತರ ಒಪ್ಪಿಗೆ ಪಡೆದೇ ಕೃಷಿಗೆ ಯೋಗ್ಯವಲ್ಲದ ಜಮೀನನ್ನು ಮಾತ್ರ ಸ್ವಾಧೀನ ಮಾಡಲಾಗುವುದು. ಆ ಸ್ಥಳದಲ್ಲಿ ಸ್ವಲ್ಪ ನೀರಾವರಿ ಪ್ರದೇಶವಿದ್ದರೆ ಅಂತಹ ರೈತರಿಗೆ ಪ್ರತ್ಯೇಕ ಪರಿಹಾರ ಸಹ ನೀಡಲಾಗುವುದು. ಪ್ರತಿಯೊಂದು ವಿಭಾಗದಲ್ಲೂ ಇಎಸ್‌ಐ ಆಸ್ಪತ್ರೆ ತೆರೆಯಲು ಸರ್ಕಾರ ತೀರ್ಮಾನಿಸಿದೆ. ಅದರ ಭಾಗವಾಗಿ ಬಿಡದಿ-ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಹ ಇಎಸ್‌ಐ ಆಸ್ಪತ್ರೆ ತೆರೆಯಲಾಗುವುದು ಎಂದು ಸಚಿವ ನಿರಾಣಿ ತಿಳಿಸಿದರು.

ನೂತನ ತಂತ್ರಜ್ಞಾನದೊಂದಿಗೆ ಉದ್ಯಮ ಪ್ರಗತಿ :  ಜವಳಿ ಮತ್ತು ಸಕ್ಕರೆ ಕಾರ್ಖಾನೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ವಾತನಾಡಿ, ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿರುವುದನ್ನು ಕಂಡಿದ್ದೇವೆ. ಆದರೆ ಇತ್ತೀಚೆಗೆ ಉದ್ಯಮ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಏಷ್ಯಾದಲ್ಲಿಯೇ ದೊಡ್ಡ ಉದ್ಯಮವಾಗಿ ಸಕ್ಕರೆ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸುತ್ತಿವೆ. ಅಲ್ಲದೆ ಇದನ್ನು ನಂಬಿದ ಕಬ್ಬು ಬೆಳೆಗಾರರು, ಸರಬರಾಜುದಾರರು, ಉದ್ದಿಮೆದಾರರು ಸೇರಿ ಅವಲಂಬಿತರಿಗೆ ಸರ್ಕಾರ ಇತರ ರಾಜ್ಯಗಳಲ್ಲಿ ನೀಡುತ್ತಿರುವ ಸವಲತ್ತುಗಳನ್ನು ರಾಜ್ಯ ಸರ್ಕಾರ ಸಹ ನೀಡಲಿದೆ ಎಂದರು. ಇದೇ ವೇಳೆ ತಾಂತ್ರಿಕತೆ, ಗುಣಮಟ್ಟ ಸೇರಿ ಮೌಲ್ಯ ವಾಪನದಲ್ಲಿ ಆಯ್ಕೆಯಾದ ಸಕ್ಕರೆ ಕಾರ್ಖಾನೆಗಳಿಗೆ ಸಚಿವರು ಪ್ರಶಂಸನಾ ಪತ್ರ ಮತ್ತು ಪ್ಲಾಟಿನಮ್, ಗೋಲ್ಡ್ ಮತ್ತು ಸಿಲ್ವರ್ ಅವಾರ್ಡ್‌ಗಳನ್ನು ನೀಡಿದರು.

ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ಅಥವಾ ಖಾಸಗಿಯವರು ನಡೆಸಬೇಕೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವಿಚಾರ ಈಗ ಮುಖ್ಯಮಂತ್ರಿ ಅವರ ಅಂಗಳದಲ್ಲಿದೆ. ರೈತರ ಹಿತದೃಷ್ಟಿಯಿಂದ ಅವರೇ ಸಂಬಂಧಿಸಿದವರ ಜತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಮುರುಗೇಶ್ ಆರ್. ನಿರಾಣಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ದಕ್ಷಿಣ ಭಾರತದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ತಂತ್ರಜ್ಜರ ಸಂಸ್ಥೆ ಸ್ಥಾಪನೆಯಾಗಿ 50 ವರ್ಷಗಳಾಗಿದೆ. ಸಕ್ಕರೆಯ ಗುಣಮಟ್ಟ ಪರಿಶೀಲಿಸಲು ಪ್ರಯೋಗಾಲಯ ಮತ್ತು ನುರಿತ ತರಬೇತಿ ನೀಡಲು ಬೆಂಗಳೂರಿನಲ್ಲಿ ಒಂದು ಎಕರೆ ಜಾಗ ಮಂಜೂರು ಮಾಡಿಕೊಡುವಂತೆ ಸಚಿವರು ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಎ.ಸಿ.ಪಾಟೀಲ್ ಅಧ್ಯಕ್ಷ, ದಕ್ಷಿಣ ಭಾರತದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ತಂತ್ರಜ್ಜರ ಸಂಸ್ಥೆ.