ನ್ಯೂಸ್

ಶ್ರದ್ಧಾದೇವಿಯ ಮಹಿಮೆ

ವಾಜಶ್ರವಸನದು ಪರಿಪೂರ್ಣ ಸಾತ್ವಿಕ ಶ್ರದ್ಧೆಯಾಗಿರಲಿಲ್ಲ. ‘‘ಶ್ರದ್ಧಾ ವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ’’ ಎಂಬಂತೆ ಅದೊಂದು ತಾಮಸ ರೀತಿಯ ಶ್ರದ್ಧೆಯೇ ಆಗಿತ್ತು. ನಚಿಕೇತನು ಪ್ರಾಯಶಃ ತಂದೆಯ ರೀತಿಯನ್ನು ಬಹುಕಾಲದಿಂದಲೂ ಮನಸ್ಸಿನಲ್ಲೇ ವಿಮಶಿಸುತ್ತಿದ್ದಿರಬೇಕು. ಆದರೆ ದಕ್ಷಿಣೆಗಾಗಿ ಕೊಟ್ಟ ಪದಾರ್ಥಗಳು ತನ್ನ ಕಣ್ಣಿಗೆ ಬೀಳುವ ತನಕ ಅವನು ಏನೊಂದೂ ನಿಷ್ಕರ್ಷೆಗೆ ಬಂದಿರಲಿಲ್ಲವೆಂದೂ, ಆ ಕ್ಷಣದಲ್ಲಿ ಮಾತ್ರ ಖಂಡಿತವಾಗಿ, ತನ್ನ ತಂದೆಯ ಯಜ್ಞ ನಿಷ್ಪಲವೆಂಬುದನ್ನು ನಿರ್ಷRಸಿಕೊಂಡನೆಂದೂ ತಿಳಿಯುವುದು.

***

‘‘ಶ್ರದ್ಧೆಯು’’ ಅವನಲ್ಲಿ ಆವೇಶವಾಯಿತು ಎಂದರೇನು? ‘‘ಶ್ರತ್’’ ಎಂದರೆ ಸತ್ಯವೆಂದರ್ಥ. ‘‘ಶ್ರತ್ ಅಸ್ಯಾಂ ಧೀಯತ ಇತಿ ಶ್ರದ್ಧಾ’’ - ಎಂದರೆ ‘‘ಇದು ಸತ್ಯವೆಂಬ ದೃಢ ಬುದ್ಧಿ, ನಿಶ್ಚಯ ಯಾವುದರಲ್ಲಿ ಉಂಟಾಗುವುದೋ ಅದು ಶ್ರದ್ಧೆ. (ಇಟ್ಞಡಜ್ಚಿಠಿಜಿಟ್ಞ ಎಂದು ಹೇಳಬಹುದು.) ಕೇವಲ ಮೂಢನಂಬಿಕೆ ಶ್ರದ್ಧೆಯಲ್ಲ. ವಿಚಾರಪೂರ್ವಕವಾಗಿ, ಸಂಪೂರ್ಣ ಹೊಣೆಗಾರಿಕೆಯ ಬುದ್ಧಿಯಿಂದ ಬರುವ ನಿಶ್ಚಯಜ್ಞಾನವೇ ಶ್ರದ್ಧೆ. (ಇದೇ ಅರ್ಜುನನಿಗೆ ಗೀತಾ ಪ್ರಾರಂಭಾಧ್ಯಾಯ ಕಾಲದಲ್ಲಿ ನಷ್ಟವಾಗಿದ್ದು ಮುಂದೆ ‘‘ಸ್ಮೃತಿರ್ಲಬ್ಧಾ’’ ಎಂಬಂತೆ ದೊರೆತುದು.) ಶ್ರದ್ಧೆ ಇಲ್ಲದೆ ಮನಸ್ಸು ಯಾವುದೇ ವಿಷಯದಲ್ಲಿ ತೊಡಗಲಾರದು; ತೊಡಗಿದರೂ ಸಿದ್ಧಿಯಾಗಲಾರದು. ಇದನ್ನೆಲ್ಲ ಮಾರ್ವಿುಕವಾದ ಭಾಷೆಯಲ್ಲಿ ಸುಪ್ರಸಿದ್ಧವಾದ ‘‘ಶ್ರದ್ಧಾ’’ಸೂಕ್ತದಲ್ಲಿ (ಋಗ್ವೇದ ಸಂಹಿತೆ.10-151) ಸೂಚಿಸಿದೆ.

‘‘ಅಗ್ನಿಯು ಸಂದೀಪನ ಹೊಂದಿ ಬೆಳಗುವುದೇ ಶ್ರದ್ಧೆಯಿಂದ. ಹವಿಸ್ಸನ್ನು ಅರ್ಪಿಸುವುದೂ ಶ್ರದ್ಧೆಯ ಮೂಲಕವೇ. ಭಜನೀಯನಾದ ಭಗನ (ದೇವರ) ತಲೆಯ ಮೇಲೆ ಇರುವ ಶ್ರದ್ಧಾದೇವಿಯನ್ನು ಕೊಂಡಾಡೋಣ’’ ಇತ್ಯಾದಿ. ಇಂದ್ರಾದಿ ದೇವತೆಗಳು ಅಸುರರನ್ನು ಜಯಿಸಿದುದಕ್ಕೂ ‘‘ಶ್ರದ್ಧಾ’’ದೇವಿಯ ಅನುಗ್ರಹವೇ ಕಾರಣ. ಯಜ್ಞಾನುಷ್ಠಾನ ಸಿದ್ಧಿಯೂ ‘‘ಅವಳ’’ ಅನುಗ್ರಹದಿಂದಲೇ ಸಾಧ್ಯ. ಸಕಲ ದೇವತೆಗಳೂ ‘‘ಇವಳ’’ನ್ನೇ ಉಪಾಸಿಸುತ್ತಾರೆ. ತ್ರಿಕಾಲಗಳಲ್ಲಿಯೂ ‘‘ಇವಳ’’ನ್ನು ಧ್ಯಾನ ಮಾಡಬೇಕೆಂದು ವೇದದ ಆದೇಶ.

ಶ್ರದ್ಧಾಂ ಪ್ರಾತರ್ಹವಾಮಹೇ ಶ್ರದ್ಧಾಂ ಮಧ್ಯಂದಿನಂ ಪರಿ |

ಶ್ರದ್ಧಾಂ ಸೂರ್ಯಸ್ಯ ನಿಮ್ರುಚಿ ಶ್ರದ್ಧೇ ಶ್ರದ್ಧಾಪಯೇಹ ನಃ || (10. 2171)

ಇತ್ಯಾದಿ. ಸಂಪ್ರದಾಯರಹಸ್ಯಜ್ಞರು ಲೋಕಮಾತೆಯಾದ ಶ್ರೀದೇವಿಯನ್ನು ‘‘ಶ್ರದ್ಧಾ’’ ಅಭಿಮಾನೀದೇವತೆಯೆಂದೂ, ಶ್ರೀ, ಭೂ, ನೀಳಾ, ಶ್ರದ್ಧಾ, ಮೇಧಾ, ಸ್ವಾಹಾ, ಸ್ವಧಾ ಇತ್ಯಾದಿ ಪರ್ಯಾಯ ನಾಮಗಳಿಂದ ವೇದದಲ್ಲಿ ಸ್ತುತಿಸಲಾಗಿದೆಯೆಂದೂ ಎತ್ತಿ ತೋರಿಸುತ್ತಾರೆ. ನಚಿಕೇತನಿಗೆ ಭಗವಂತನ ಶ್ರೀ-ಅನುಗ್ರಹ, ‘‘ಬ್ರಹ್ಮಶ್ರೀ’’ ಅನುಗ್ರಹ ಒದಗಿಬಂದ ಕಾಲವೆಂದೂ ತಿಳಿಯೋಣ. ‘‘ಶ್ರದ್ಧೆ’’ ಅವನಲ್ಲಿ ಆವಿರ್ಭಾವವಾದಳು. ಅದರಿಂದಲೇ ಅವನಿಗೆ ಬ್ರಹ್ಮವಿದ್ಯಾಪ್ರಾಪ್ತಿಯಾಗುವ ಯೋಗ ಒದಗಿಬಂದಿತು.

ತನ್ನ ತಂದೆ ಯಾಗದಲ್ಲಿ ದಕ್ಷಿಣೆಯಾಗಿ ಕೊಟ್ಟ ಗೋವುಗಳು, ಇನ್ನು ಮುಂದೆ ನೀರು ಕುಡಿಯಲೂ ಸಾಮರ್ಥ್ಯ ಇಲ್ಲದವುಗಳಾಗಿದ್ದವು. ತಿನ್ನಬಹುದಾದ ಹುಲ್ಲನ್ನೆಲ್ಲ ತಿಂದು ಮುಗಿಸಿದ್ದವು. ಹಾಲು ಕರೆಯುವಷ್ಟನ್ನೂ ಕರೆದಾಗಿತ್ತು. ಕರು ಹಾಕುವ ಇಂದ್ರಿಯ ಸಾಮರ್ಥ್ಯವಂತೂ ಏನೂ ಉಳಿದಿರಲಿಲ್ಲ. ಅಂದರೆ ಇವುಗಳನ್ನು ದಾನ ಸ್ವೀಕಾರ ಮಾಡಿದವನಿಗೆ ಇವುಗಳಿಂದ ಏನೊಂದೂ ಪ್ರಯೋಜನವಾಗುವಂತಿರಲಿಲ್ಲ. ಮನೆಗೆ ಕರೆದೊಯ್ಯುವ ಮುಂಚೆಯೇ ದಾರಿಯಲ್ಲೇ ಸಾಯುವಂತಿದ್ದವೆಂದು ಕಾಣುತ್ತದೆ. ಇವುಗಳನ್ನು ಕಣ್ಣಾರೆ ಕಂಡ ನಚಿಕೇತನಿಗೆ, ತನ್ನ ಹೃದಯವನ್ನು ಹೊಕ್ಕಿದ್ದ ‘‘ಶ್ರದ್ಧಾದೇವಿ’’ ಹೇಳಿದಳು.