ನ್ಯೂಸ್

ಪ್ರತಿಭಾವಂತ ವಿದ್ಯಾರ್ಥಿನಿ, ವೈದ್ಯಳಾಗುವ ಕನಸು; ಮಗಳ ನೆನೆದ ತಂದೆ ಭಾವುಕ ನುಡಿ | Sudiksha Missing

Sudiksha Missing Case: ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ಸುದೀಕ್ಷಾ ಕೊನಂಕಿ (20) ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಇದೀಗ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.

ಕೆರಿಬಿಯನ್ ದೇಶಕ್ಕೆ ರಜೆಯ ಮೇಲೆ ಪ್ರವಾಸ ಕೈಗೊಂಡಿದ್ದ ಸುದೀಕ್ಷಾ, ಬೀಚ್‌ನಲ್ಲಿ ಅಡ್ಡಾಡುವಾಗ ದಿಢೀರನೇ ಕಣ್ಮರೆಯಾಗಿದ್ದಾರೆ. ಕಡಲ ತೀರದಲ್ಲಿದ್ದ ಯುವತಿ, ಕ್ಷಣಮಾತ್ರದಲ್ಲೇ ನಾಪತ್ತೆಯಾದ ಸಂಗತಿ ಅನೇಕರಲ್ಲಿ ಗೊಂದಲ ಹುಟ್ಟುಹಾಕಿದೆ. ಸುದೀಕ್ಷಾಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಆಕೆ ಸಮುದ್ರಕ್ಕೆ ಹತ್ತಿರದಲ್ಲಿದ್ದ ಹಿನ್ನೆಲೆ ಪೊಲೀಸರು ಸುದೀಕ್ಷಾ ಏನಾದರೂ ಅಲೆಗಳಲ್ಲಿ ಕೊಚ್ಚಿಕೊಂಡು ಹೋಗಿರಬಹುದೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೇ ಡ್ರೋನ್​ ಮತ್ತು ರಕ್ಷಣಾ ಪಡೆ ಸಹಾಯದಿಂದ ಕಳೆದ 4 ದಿನಗಳಿಂದ ನಾಪತ್ತೆಯಾದ ಸ್ಥಳದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ತಂದೆ ಭಾವುಕ ನುಡಿ

ಮಗಳು ಕಾಣೆಯಾದ ವಿಚಾರ ಗೊತ್ತಾದ ಕೂಡಲೇ ಆಕೆಯ ಪಾಲಕರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪುತ್ರಿಯ ಹಿಂತಿರುಗುವಿಕೆಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಘಟನೆ ಕುರಿತಾಗಿ ಪ್ರತಿಕ್ರಿಯಿಸಿದ ಸುದೀಕ್ಷಾಳ ತಂದೆ ಸುಬ್ಬರಾಯುಡು, "ನನ್ನ ಮಗಳು ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಳೆ. ವಿದ್ಯಾಭ್ಯಾಸದ ನಡುವೆ ಸ್ನೇಹಿತರೊಂದಿಗೆ ರಜೆ ಕಳೆಯಲು ಪಂಟಾ ಕಾನಾಗೆ ಹೋಗುವುದಾಗಿ ನಮಗೆ ತಿಳಿಸಿದ್ದಳು. ಅದೇ ಅವಳು ನಮ್ಮೊಂದಿಗೆ ಆಡಿದ ಕೊನೆಯ ಮಾತುಗಳು" ಎಂದು ಭಾವುಕರಾದರು.

"ನನ್ನ ಮಗಳು ಮೆರಿಟ್ ವಿದ್ಯಾರ್ಥಿನಿ. ಮುಂದೆ ವೈದ್ಯೆಯಾಗುವ ಕನಸು ಹೊತ್ತಿದ್ದಳು" ಎಂದು ಕಣ್ಣೀರಿಟ್ಟರು. ಘಟನೆಯ ಬಗ್ಗೆ ಪೊಲೀಸರು ಚುರುಕು ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆಕೆಯ ಜತೆಗಿದ್ದ ಸ್ನೇಹಿತರನ್ನು ಪ್ರಶ್ನಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾರ ವಿರುದ್ಧವೂ ಯಾವುದೇ ಆರೋಪಗಳು ದಾಖಲಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಏನಿದು ಘಟನೆ?

ಭಾರತೀಯ ಮೂಲದ ವಿದ್ಯಾರ್ಥಿನಿ ಸುದೀಕ್ಷಾ, ಅಮೆರಿಕದ ವರ್ಜೀನಿಯಾದಲ್ಲಿ ನೆಲೆಸಿದ್ದಾರೆ. ಅಲ್ಲಿನ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಳೆ. ಕಳೆದ ವಾರ, ತಮ್ಮ ಸ್ನೇಹಿತರೊಂದಿಗೆ ಕೆರಿಬಿಯನ್ ದೇಶಕ್ಕೆ ರಜೆಯ ಮೇಲೆ ಹೋಗಿದ್ದರು. ಐದು ಯುವತಿಯರೊಂದಿಗೆ ಡೊಮಿನಿಕನ್ ಗಣರಾಜ್ಯದ ಜನಪ್ರಿಯ ಪ್ರವಾಸಿ ಪಟ್ಟಣವಾದ ಪಂಟಾ ಕಾನಾಕ್ಕೆ ಭೇಟಿ ನೀಡಿದ್ದರು.

ಆಕೆ ಮಾರ್ಚ್ 6ರಂದು, ರಿಯು ರಿಪಬ್ಲಿಕಾ ರೆಸಾರ್ಟ್‌ನಲ್ಲಿ ಕಡಲತೀರದ ಉದ್ದಕ್ಕೂ ಬಿಕಿನಿ ಧರಿಸಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದಾದ ನಂತರ, ಆಕೆ ಇದ್ದಕ್ಕಿಂದ್ದಂತೆ ನಾಪತ್ತೆಯಾಗಿದ್ದಾಳೆ. ಈ ವಿಚಾರ ಗೊತ್ತಾದ ಬಳಿಕ ಆಕೆಯ ಸ್ನೇಹಿತರು ಬಹಳ ಚಿಂತಿತರಾಗಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ, ದೂರು ದಾಖಲಿಸಿದ್ದಾರೆ. ಕಳೆದ ಗುರುವಾರ ಬೆಳಗಿನ ಜಾವ 4.50ರ ಸುಮಾರಿಗೆ ರಿಯು ರಿಪಬ್ಲಿಕಾ ರೆಸಾರ್ಟ್ ಬೀಚ್‌ನಲ್ಲಿ ಆಕೆ ಕೊನೆಯ ಬಾರಿಗೆ ಕಾಣಿಸಿಕೊಂಡಿರುವುದು ತಿಳಿದುಬಂದಿದೆ,(ಏಜೆನ್ಸೀಸ್).