ನ್ಯೂಸ್

ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಧಾ ಮೂರ್ತಿ

ದೆಹಲಿ: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಇನ್ಫೋಸಿಸ್ ಸುಧಾ ಮೂರ್ತಿ ಅವರು ಇಂದು ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.

73ರ ಹರೆಯದ ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ,ಲೇಖಕಿ ಕಳೆದ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ರಾಜ್ಯಸಭೆಗೆ ನಾಮನಿರ್ದೇಶನಗೊಂಡರು.

ಸುಧಾ ಮೂರ್ತಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರು ಸಂಸತ್ ಭವನದ ತಮ್ಮ ಚೇಂಬರ್‌ನಲ್ಲಿ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಸಭಾನಾಯಕ ಪಿಯೂಷ್ ಗೋಯಲ್ ಕೂಡ ಉಪಸ್ಥಿತರಿದ್ದರು. ಈ ಸಮಾರಂಭಕ್ಕೆ ಸುಧಾ ಮೂರ್ತಿ ಪತಿ ಎನ್‌ಆರ್ ನಾರಾಯಣ ಮೂರ್ತಿ ಕೂಡಾ ಉಪಸ್ಥಿತರಾಗಿದ್ದರು.

ಸುಧಾ ಮೂರ್ತಿ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಹೆಸರುವಾಸಿಯಾಗಿದ್ದಾರೆ. ಇವರು ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ, ಪದ್ಮಶ್ರೀ (2006) ಮತ್ತು ಪದ್ಮಭೂಷಣ (2023) ಪುರಸ್ಕೃತರಾಗಿದ್ದಾರೆ. ಇನ್ಫೋಸಿಸ್ ಈಗ USD 80 ಶತಕೋಟಿಗೂ ಹೆಚ್ಚು ಮಾರುಕಟ್ಟೆಯನ್ನು ಹೊಂದಿದೆ. ಅವರ ಮಗಳು ಅಕ್ಷತಾ ಬ್ರಿಟನ್ ಪ್ರಧಾನಿಯಾಗಿರುವ ರಿಷಿ ಸುನಕ್ ಅವರ ಪತ್ನಿ.