ನ್ಯೂಸ್

ಬೇರೆ ನಟರ ಜತೆ ಪೈಪೋಟಿ ನೀಡಲು ಅಪ್‌ಡೇಟ್ ಕೊಡುವುದಕ್ಕೆ ಸಾಧ್ಯವಿಲ್ಲ; ಫ್ಯಾನ್ಸ್​​ಗೆ ಕಿಚ್ಚಿನ ಕಿವಿಮಾತು

ಬೆಂಗಳೂರು: ಸ್ಯಾಂಡಲ್​ವುಡ್​​ನ ಬಹುನೀರಿಕ್ಷಿತ ಸಿನಿಮಾ  ʻಮ್ಯಾಕ್ಸ್’ . ಕಿಚ್ಚ ಸುದೀಪ್​ ಅಭಿನಯದ ಈ ಸಿನಿಮಾ ಕುರಿತಾಗಿ ಹಲವು ದಿನಗಳಿಂದ ಸುದ್ದಿಯಾಗುತ್ತಲೇ ಇದೆ. ಆದರೆ ಈ ಸಿನಿಮಾ ಕುರಿತಾಗಿ ಚಿತ್ರತಂಡ ಈ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಹೀಗಾಗಿ  ಕಿಚ್ಚನ ಫ್ಯಾನ್ಸ್​ ಸಿನಿಮಾ ಕುರಿತಾಗಿ ಕೇಳುತ್ತಲೆ ಇದ್ದರು. ಈ ಕುರಿತಾಗಿ ಅಭಿನಯ ಚಕ್ರವರ್ತಿ ಸ್ವತಃ ಉತ್ತರ ನೀಡಿದ್ದಾರೆ.

ʻಮ್ಯಾಕ್ಸ್’ ಸಿನಿಮಾ ಚಿತ್ರೀಕರಣದ ನಡುವೆಯೇ ಕಿಚ್ಚ ಸುದೀಪ್  ಬಿಗ್‌ಬಾಸ್ ಸೀಸನ್ 10 ಶೋ ನಿರೂಪಣೆ ಮಾಡಿದ್ದರು. ಇನ್ನು ಫೆಬ್ರವರಿ 23ರಿಂದ ಸಿಸಿಎಲ್‌ 10ನೇ ಸೀಸನ್ ಆರಂಭವಾಗುತ್ತಿದೆ. ಟೂರ್ನಿಯಲ್ಲಿ ಕಿಚ್ಚ ‘ಕರ್ನಾಟಕ ಬುಲ್ಡೊಜರ್ಸ್’ ತಂಡವನ್ನು ಮುನ್ನಡೆಸಲಿದ್ದಾರೆ. ಫ್ಯಾನ್ಸ್‌ ಒಂದೇ ಸಮನೆ ಕಿಚ್ಚ ಸುದೀಪ್‌ ಅವರ ಸಿನಿಮಾಗಳ ಅಪ್‌ಡೇಟ್‌ ಕೇಳುತ್ತಲೇ ಇದ್ದಾರೆ.

ಕಿಚ್ಚ ಅವರು ಎಕ್ಸ್‌ನಲ್ಲಿ ʻʻಎಲ್ಲರಿಗೂ ಶುಭೋದಯ. ಎಲ್ಲರಿಗೂ ಪ್ರೀತಿಯ ಅಪ್ಪುಗೆ. ಅಪ್‌ಡೇಟ್‌ಗಳ ಬಗ್ಗೆ ಬರುತ್ತಿರುವ ಟ್ವೀಟ್‌ಗಳನ್ನು ನೋಡಿ ಖುಷಿಯಾಗುತ್ತದೆ. ಬೇರ ನಟರ ಸಿನಿಮಾಗಳು ಬಿಡುಗಡೆಯಾಗಿದೆಯೆಂದು, ಬೇರೆ ನಟರ ಜತೆ ಸ್ಪರ್ಧಿಸಲೆಂದು ಅಪ್‌ಡೇಟ್ ಕೊಡುವುದಕ್ಕೆ ಸಾಧ್ಯವಿಲ್ಲ. ಚಿತ್ರತಂಡ ಏನಾದರೂ ರಿಲೀಸ್ ಮಾಡಲು ಅಥವಾ ಘೋಷಿಸಲು ಸಿದ್ಧವಿದ್ದಾಗ ಮಾತ್ರ ಅಪ್‌ಡೇಟ್ ಕೊಡಲು ಸಾಧ್ಯ. ನನ್ನ ಕೆಲಸದ ಬಗ್ಗೆ ಫ್ಯಾನ್ಸ್‌ ತೋರಿಸಿದ ಪ್ರೀತಿಗೆ ನಾನು ಆಭಾರಿ. ಆದರೆ ಬಿಗ್‌ಬಾಸ್ ಅಥವಾ ಸಿಸಿಎಲ್‌ ಮೇಲಿನ ವ್ಯಂಗ್ಯ ಸರಿಯಲ್ಲ. ಇದು ಚಿತ್ರದ ಕಡೆಗೆ ಒಬ್ಬರ ಆಸಕ್ತಿ, ಕುತೂಹಲವನ್ನು ಪ್ರದರ್ಶಿಸುವ ಮಾರ್ಗವಲ್ಲ. ‘ಮ್ಯಾಕ್ಸ್’ ಸಿನಿಮಾ ಚೆನ್ನಾಗಿ ರೂಪುಗೊಳುತ್ತಿದೆ. ನಾವು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಫ್ಯಾನ್ಸ್‌ ರಂಜಿಸಲು ಪ್ರಯತ್ನಿಸುತ್ತಿದ್ದೇನೆ. ಮನರಂಜಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆʼʼಎಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಮ್ಯಾಕ್ಸ್’ ಸಿನಿಮಾ ವಿಚಾರಕ್ಕೆ ಬಂದರೆ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ‘ಮಹಾಬಲಿಪುರಂ’ ಭಾರೀ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ.