ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಫಿನಾಲೆ ಬಂದೇ ಬಿಟ್ಟಿದೆ. ಆರು ಸ್ಪರ್ಧಿಗಳ ಮಧ್ಯೆ ಸ್ಪರ್ಧೆ ನಡೆಯುತ್ತಿದೆ. ವರ್ತೂರು ಸಂತೋಷ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್,ಹಾಗೂ ಡ್ರೋನ್ ಪ್ರತಾಪ್ ಮಧ್ಯೆ ಒಬ್ಬರು ಕಪ್ ಎತ್ತಲಿದ್ದಾರೆ. ಫಿನಾಲೆ ಈಗಾಗಲೇ ಶುರುವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಫೈನಲಿಸ್ಟ್ ಆಗಿರುವ ಆರು ಜನ ಸ್ಪರ್ಧಿಗಳನ್ನು, ಅವರ ಮನೆಯವರನ್ನು ಮಾತಾಡಿಸಿದ್ದಾರೆ. ಈ ಕಲರ್‌ಫುಲ್ ವೇದಿಕೆಯ ತುಣುಕನ್ನು ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ.
ಈ ಹತ್ತು ಸೀಸನ್‌ನಲ್ಲಿ ಇಷ್ಟು ಸುದ್ದಿ ಮಾಡಿದ ಸೀಸನ್ ಬೇರೆ ಇಲ್ಲ ಎಂದು ಸ್ವತಃ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿ ತುಂಬಾ ನೋವನ್ನು ಅನುಭವಿಸುತ್ತಾರೆ ಎಂದು ಕಿಚ್ಚ ಸುದೀಪ್ ಅವರು ಹೇಳಿದಾಗ ಮನೆಯೊಳಗಿನ ಉಳಿದ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ ಮೂಡಿದರೆ, ವರ್ತೂರು ಸಂತೋಷ್ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಬಿಗ್ಬಾಸ್ ಮತ್ತು ಸುದೀಪ್ ಅವರು ಕೊಟ್ಟ ಧೈರ್ಯ ಎಂದಿಗೂ ಮರೆಯಲ್ಲ ಎಂದು ಸಂತೋಷ್ ಹೇಳಿದಾಗ ಪೋಷಕರ ಗ್ಯಾಲರಿಯಲ್ಲಿ ಕೂತಿದ್ದ ವರ್ತೂರು ಸಂತೋಷ್ ಅಮ್ಮನೂ ಸೆರಗಿನಲ್ಲಿ ಕಣ್ಣೀರು ಒರೆಸಿಕೊಂಡರು. ಹುಲಿ ಉಗುರಿನ ಕೇಸ್ ಬಗ್ಗೆ ಮಾತನಾಡುತ್ತಿದ್ದಂತೆ ಸಂತೋಷ್ ತಾಯಿ ಅಳುತ್ತಿದ್ದರು.
ಡ್ರೋನ್ ಪ್ರತಾಪ್ ತಾಯಿ ಭಾವುಕರಾಗಿ ಮಾತನಾಡಿ, ನಮ್ಮ ಮಗನನ್ನು ನಮಗೆ ಕೊಟ್ಟಿದ್ದೀರಾ. ಈ ವೇದಿಕೆಗೆ ಚಿರಋಣಿ ಎಂದು ಕಣ್ಣೀರು ಹಾಕಿದರು. ಎಲ್ಲರ ಮುಖದಲ್ಲಿಯೂ ಬಿಗ್ ಬಾಸ್ ವೇದಿಕೆಯ ಕುರಿತು ಕೃತಜ್ಞತೆಯ ಭಾವ ತುಂಬಿದೆ.