ನ್ಯೂಸ್

ವಾಲ್ಮೀಕಿ ಜಾತ್ರೆಗೆ ಬಾರದ ಸುದೀಪ್; ಆಕ್ರೋಶಿತ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್

ದಾವಣಗೆರೆ: ಜಿಲ್ಲೆಯ ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಇಂದು ಸಂಜೆ 5.30 ಕ್ಕೆ ನಟ ಸುದೀಪ್ ಕಾರ್ಯಕ್ರಮ ನಿಗದಿಯಾಗಿತ್ತು. ಇದೀಗ ಕಾರ್ಯಕ್ರಮಕ್ಕೆ ಸುದೀಪ್ ಬರದಿದ್ದಕ್ಕೆ ಸಿಟ್ಟಾದ ಅಭಿಮಾನಿಗಳು, ಖುರ್ಚಿಗಳನ್ನು ತೂರಾಡಿ ಜಾತ್ರಾ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಚ್ಚಿನ ನಟ ವಾಲ್ಮೀಕಿ ಜಾತ್ರೆಗೆ ಆಗಮಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಮತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಕಾರಣಾಂತರದಿಂದ ಸುದೀಪ್ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಇದೀಗ ನೆಚ್ಚಿನ ನಟ ಬರುತ್ತಾರೆ ಎಂಬ ನಿರೀಕ್ಷೆ ಹುಸಿಯಾಗುತ್ತಿದ್ದಂತೆ ಸೇರಿದ್ದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಸುದೀಪ್ ನಿಗದಿಯಾಗಿದ್ದ ಸಂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಸುದೀಪ್​ ಬರುತ್ತಾರೆಂದು ಅಭಿಮಾನಿಗಳು ಬೆಳಗ್ಗೆಯಿಂದ ಕಾದು ಕುಳಿತಿದ್ದರು. ಸಂಜೆಯಾಗುತ್ತಲೇ ಆಯೋಜಕರು ಸುದೀಪ್ ಆಗಮಿಸುತ್ತಿಲ್ಲ ಎಂದು ತಿಳಿಸುತ್ತಿದ್ದಂತೆ ಆಕ್ರೋಶಗೊಂಡ ಅಭಿಮಾನಿಗಳು ಆಸನಗಳನ್ನು ಎಳೆದಾಡಿದ್ದಾರೆ.

ಗಲಾಟೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು ಕೊನೆಗೆ ಲಾಠಿ ಚಾರ್ಜ್ ಮಾಡಿದ್ದಾರೆ. ಬೆಳಗ್ಗಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡುತ್ತಾ, ಸುದೀಪ್ ಬರುತ್ತಾನೆ. ನಾನು ಬಾ ಎಂದು ಫೋನ್ ಮಾಡುತ್ತೇನೆ ಎಂದು ಹೇಳಿದ್ದರು. ಇದರಿಂದ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾದಿದ್ದರು.