ಮುಸ್ಲಿಂರು ಬಹುಸಂಖ್ಯಾತರಾಗಿರುವ ಅಫ್ಘಾನ್ನಲ್ಲಿ ಕಳೆದ ಕೆಲ ದಶಕಗಳಿಂದ ನಿರಂತರವಾಗಿ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದರೂ, ಅಲ್ಲಿನ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅಫ್ಘಾನ್ನಲ್ಲಿ ಮುಸ್ಲಿಂ ಸಂಪ್ರದಾಯವಾದಿಗಳ ದಬ್ಬಾಳಿಕೆ ಹೆಚ್ಚುತ್ತಿರುವುದರಿಂದಾಗಿ ಹಿಂದೂ ಮತ್ತು ಸಿಖ್ ಕುಟುಂಬಗಳು ತೀವ್ರ ಅಭದ್ರತೆ ಮತ್ತು ತೊಂದರೆ ಅನುಭವಿಸುತ್ತಿವೆ. ‘ನಾವು ಇನ್ನು ಮುಂದೆ ಇಲ್ಲಿ ವಾಸಿಸಲು ಸಾಧ್ಯವಿಲ್ಲ. ಕಳೆದ ಮಾರ್ಚ್ನಲ್ಲಿ ನಮ್ಮ ದೇವಾಲಯದ ಮೇಲೆ ದಾಳಿ ನಡೆಸಲಾಯಿತು. ಆ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಬಂದೂಕುಧಾರಿಗಳು ನನ್ನ ಸಹೋದರಿ, ಸೋದರಳಿಯಂದಿರು ಮತ್ತು ಸೊಸೆ ಸೇರಿದಂತೆ ಕುಟುಂಬದ 7 ಮಂದಿ ಹಾಗೂ 25 ಸಿಖ್ರನ್ನು ಕೊಂದಿದ್ದಾರೆ’ ಎಂದು ಅಲ್ಲಿನ ಅಲ್ಪಸಂಖ್ಯಾತರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಉಗ್ರರ ಬೆದರಿಕೆ ಇರುವುದರಿಂದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಅಲ್ಲಿನ ಪರಿಸ್ಥಿತಿ ವಿವರಿಸುವಾಗ ಯಾರೊಬ್ಬರೂ ತಮ್ಮ ಹೆಸರು ಹೇಳಲು ಒಪ್ಪದ ಪರಿಸ್ಥಿತಿ ಅಲ್ಲಿದೆ. 2010ರಲ್ಲಿ ಅಫ್ಘಾನಿಸ್ತಾನ ಸರ್ಕಾರ ಸಂಸತ್ತಿನಲ್ಲಿ ಒಂದು ಸದಸ್ಯ ಸ್ಥಾನವನ್ನು ಧಾರ್ವಿುಕ ಅಲ್ಪಸಂಖ್ಯಾತರಿಗೆ ನೀಡಲು ನಿರ್ಧರಿಸಿತು. ಸದ್ಯ ಇಬ್ಬರು ಸಿಖ್ ಪ್ರತಿನಿಧಿಗಳು ಸಂಸತ್ನಲ್ಲಿದ್ದಾರೆ.
ಪ್ರಮುಖ ಘಟನೆಗಳು * 1980ರ ದಶಕದಲ್ಲಿ ಸೋವಿಯತ್ ಯುದ್ಧದ ಸಮಯದಲ್ಲಿ ಅಭದ್ರತೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್, ಹಿಂದೂ ಕುಟುಂಬಗಳು ಭಾರತಕ್ಕೆ ವಲಸೆ ಬಂದವು. * 1990ರ ದಶಕದಲ್ಲಿ ಹಿಂದೂ ಮತ್ತು ಸಿಖ್ರಿಗೆ ಕೈತೋಳಿಗೆ ಹಳದಿ ಪಟ್ಟಿ ಕಟ್ಟಿಕೊಳ್ಳುವಂತೆ ಆದೇಶಿಸಲಾಯಿತು. ಇದರಿಂದ ಹಿಂದೂಗಳು ಸಮಾಜದಲ್ಲಿ ಪ್ರತ್ಯೇಕಿಸಲ್ಪಟ್ಟರು. * 1992ರಲ್ಲಿ ನಜೀಬುಲ್ಲಾ ಆಳ್ವಿಕೆ ಅಂತ್ಯದೊಂದಿಗೆ ಸಿಖ್ರು ಮತ್ತು ಹಿಂದೂಗಳ ಮೇಲೆ ದಬ್ಬಾಳಿಕೆ ಹೆಚ್ಚಾಗಿ ಸಾವಿರಾರು ಅಲ್ಪಸಂಖ್ಯಾತ ಕುಟುಂಬಗಳು ವಲಸೆಯ ದಾರಿ ಹಿಡಿದವು. * 1992-96ರ ಅವಧಿಯಲ್ಲಿ ವಿವಿಧ ಬಣಗಳ ನಡುವಿನ ಯುದ್ಧದಲ್ಲಿ ಕಾಬೂಲ್ ಹಾಗೂ ಸುತ್ತಮುತ್ತಲಿದ್ದ ಅನೇಕ ಹಿಂದೂ ದೇವಾಲಯಗಳು ನಾಶವಾದವು. * 1980ರ ದಶಕದಲ್ಲಿ 2 ಲಕ್ಷದಷ್ಟಿದ್ದ ಅಲ್ಪಸಂಖ್ಯಾತರ ಸಂಖ್ಯೆ 2013ರ ಹೊತ್ತಿಗೆ ಸುಮಾರು 800 ಕುಟುಂಬಗಳಿಗೆ ಇಳಿಯಿತು.
ತಾಲಿಬಾನ್ ಆಳ್ವಿಕೆಯಲ್ಲಿ ಬರ್ಬರ್ ಹತ್ಯೆ: ಅಫ್ಘಾನಿಸ್ತಾನದಲ್ಲಿ 1996ರಿಂದ 2001ರವರೆಗೆ ತಾಲಿಬಾನ್ ಉಗ್ರರೇ ಆಡಳಿತ ನಡೆಸಿದರು. ಇನ್ನೂ ಕೂಡ ತಾಲಿಬಾನಿಗಳ ಅಟ್ಟಹಾಸ ಮುಂದುವರಿದಿದ್ದು, ಭದ್ರತಾ ಪಡೆಗಳೊಂದಿಗೆ ನಿರಂತರ ಕಾದಾಟಗಳು ನಡೆಯುತ್ತಲೇ ಇವೆ. ಇಸ್ಲಾಮಿಕ್, ಷರಿಯಾ ಕಾನೂನನ್ನು ತಾಲಿಬಾನ್ ಕಟ್ಟುನಿಟ್ಟಾಗಿ ಜಾರಿಗೆ ತಂದಿತ್ತು. ಇದರ ಪರಿಣಾಮ ಸಾರ್ವಜನಿಕವಾಗಿ ಲಕ್ಷಾಂತರ ಜನರನ್ನು ಹತ್ಯೆ ಮಾಡಲಾಯಿತು. ಹೆಣ್ಣುಮಕ್ಕಳು ಶಾಲೆಗಳಿಗೆ ಹೋಗುವುದನ್ನು ತಪ್ಪಿಸಲಾಯಿತು. ಈ ವೇಳೆ ಹಿಂದೂಗಳು ಮತ್ತು ಸಿಖ್ರನ್ನು ಗುರುತಿಸುವ ಸಲುವಾಗಿ ಅವರು ಹಳದಿ ಪಟ್ಟಿ ಧರಿಸಿರಬೇಕು ಎಂಬ ನಿಯಮ ಹೇರಲಾಗಿತ್ತು. ಜಾಗತಿಕವಾಗಿ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿಯಮ ದೀರ್ಘಕಾಲ ಉಳಿಯಲಿಲ್ಲ. ಸಂಗೀತ, ಟಿವಿ ವೀಕ್ಷಣೆ ಮತ್ತು ಗಾಳಿಪಟ ಹಾರಿಸುವುದನ್ನು ನಿಷೇಧಿಸಲಾಯಿತು. ಮಹಿಳೆಯರು ಕೆಲಸಕ್ಕೆ ಹೋಗಬಾರದು ಎಂಬ ನಿರ್ಬಂಧ ವಿಧಿಸಲಾಯಿತು. ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ ಕಠಿಣ ಮತ್ತು ಕ್ರೂರ ಶಿಕ್ಷೆಗಳನ್ನು ವಿಧಿಸಲಾಗುತ್ತಿತ್ತು. ಹಿಂದೂಗಳು ಮತ್ತು ಸಿಖ್ರ ಮನೆಗಳು, ವ್ಯವಹಾರ ಸ್ಥಳಗಳು ಹಾಗೂ ಅನೇಕ ಮಂದಿರಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ಅನೇಕ ಕುಟುಂಬಗಳು ಗುರುದ್ವಾರ ಅಥವಾ ಅಳಿದುಳಿದ ಮಂದಿರಗಳಲ್ಲಿ ವಾಸಿಸುತ್ತಿವೆ.
ಗುರುದ್ವಾರದ ಮೇಲೆ ದಾಳಿ
2020ರ ಮಾರ್ಚ್ನಲ್ಲಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿನ ಗುರುದ್ವಾರದ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಆ ವೇಳೆ ಗುರುದ್ವಾರದಲ್ಲಿ ಸುಮಾರು 150 ಜನರಿದ್ದರು. ದಾಳಿಯಲ್ಲಿ ಮಕ್ಕಳೂ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ದಾಳಿ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿತ್ತು. ಇದಕ್ಕೂ ಮೊದಲು ಎರಡು ವರ್ಷಗಳ ಹಿಂದೆ ಅಧ್ಯಕ್ಷ ಆಶ್ರಫ್ ಘನಿಯನ್ನು ಭೇಟಿಯಾಗಲು ಹೊರಟಿದ್ದ ಸಿಖ್ರು ಮತ್ತು ಹಿಂದೂಗಳ ನಿಯೋಗವೊಂದರ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಆಗ 10 ಸಿಖ್ರು ಹಾಗೂ 7 ಮಂದಿ ಹಿಂದೂಗಳು ಸಾವನ್ನಪ್ಪಿದ್ದರು.
ಭಾರತಕ್ಕೆ ವಲಸೆ
ಕಾಬೂಲ್ ಗುರುದ್ವಾರದ ಮೇಲಿನ ದಾಳಿ ಬಳಿಕ 180 ಸಿಖ್ ಕುಟುಂಬಗಳು ಭಾರತಕ್ಕೆ ವಲಸೆ ಬಂದಿವೆ. ಇದಕ್ಕೂ ಮೊದಲು ಕಳೆದ ವರ್ಷ ಆಗಸ್ಟ್ನಲ್ಲಿ 176 ಸಿಖ್ ಮತ್ತು ಹಿಂದೂ ಕುಟುಂಬಗಳು ವಿಶೇಷ ವೀಸಾದಡಿ ಭಾರತಕ್ಕೆ ಬಂದಿವೆ. ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ನೆಲೆ ಕಲ್ಪಿಸುವ ಬಗ್ಗೆ ಈ ಮೊದಲು ಭರವಸೆ ನೀಡಿದ್ದ ಅಧ್ಯಕ್ಷ ಅಶ್ರಫ್ ಘನಿ, ಈವರೆಗೂ ಕೂಡ ಯಾವುದೇ ಸುರಕ್ಷಿತ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ.
ಸಿಖ್-ಹಿಂದೂ ಬಾಂಧವ್ಯ
ಅಫ್ಘಾನಿಸ್ತಾನದಲ್ಲಿ ಸಿಖ್ ಮತ್ತು ಹಿಂದೂ ಎರಡೂ ಸಮುದಾಯಗಳು ಒಟ್ಟಿಗೆ ಅನ್ಯೊನ್ಯವಾಗಿವೆ. ಹಲವು ಕಡೆಗಳಲ್ಲಿ ಎರಡು ಸಮುದಾಯದ ಪ್ರಾರ್ಥನೆಗಳನ್ನು ಒಂದೇ ಕಡೆ (ದೇವಾಲಯ ಅಥವಾ ಗುರುದ್ವಾರದಲ್ಲಿ) ನಡೆಸಲಾಗುತ್ತದೆ.