ಶಿಕಾರಿಪುರ: ಇಂದಿನ ಸ್ಪರ್ಧಾತ್ಮಕ ಯುಗದ ವೇಗಕ್ಕೆ ತಕ್ಕಂತೆ ನಾವು ಸಹ ಓಡಬೇಕು. ಇಲ್ಲಿ ನಮ್ಮ ಪರಿಶ್ರಮ, ಅಧ್ಯಯನ ಹಾಗೂ ಸಂಕಲ್ಪ ಶಕ್ತಿಯೇ ಮುಖ್ಯವಾಗುತ್ತದೆ ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಹೇಳಿದರು.
ಪಟ್ಟಣದ ಕುಮದ್ವತಿ ಪ್ರಥಮದರ್ಜೆ ಕಾಲೇಜಿನಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಂತರ ಕಾಲೇಜು ಸ್ಪರ್ಧೆಗಳ ಉತ್ಸವ ಯುಕ್ತಿ-1.0 ಉದ್ಘಾಟಿಸಿ ಮಾತನಾಡಿದ ಅವರು ಮುಂದಿನ ಜಗತ್ತು ಜ್ಞಾನ ಮತ್ತು ಕೌಶಲಗಳಿಂದ ಕೂಡಿರುತ್ತದೆ ಎಂದರು.
ವಿದ್ಯಾರ್ಥಿಯು ಜ್ಞಾನ, ಕೌಶಲ, ಸೃಜನಶೀಲತೆ ಜತೆಗೂಡಿ ರೂಪಿತಗೊಂಡಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ನವ ಭಾರತ ನಿಮಾಣ ಮತ್ತು ಅಭಿವೃದ್ಧಿಯಲ್ಲಿ ಯುವಜರ ಪಾತ್ರ ದೊಡ್ಡದು. ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ನಾಳೆಯ ಕನಸಿನೊಂದಿಗೆ ಹೆಜ್ಜೆ ಇಡಬೇಕು. ಶೈಕ್ಷಣಿಕ ಚಟುವಟಿಕೆ, ಉತ್ತಮ ಸಂವಹನ ಹಾಗೂ ಬದಲಾವಣೆಗೆ ಹೊಂದಿಕೊಳ್ಳುವ ಅರಿವು ವ್ಯಕ್ತಿಯನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.
ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಮೇಶ ಮಾತನಾಡಿ, ವಿದ್ಯಾರ್ಥಿ ಹಂತದಲ್ಲಿಯೇ ಶಿಸ್ತು ಮತ್ತು ಸಮಯ ಪರಿಪಾಲನೆ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕುಮದ್ವತಿ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ವೀರೇಂದ್ರ ಮಾತನಾಡಿ, ಇಂದಿನ ಯುವ ಶಕ್ತಿ ಭಾರತದ ಭವ್ಯ ಪರಂಪರೆಯ ಮತ್ತು ಅಸ್ಮಿತೆಯ ಪ್ರತಿನಿಧಿಗಳಾಗಬೇಕು. ಜಗತ್ತೇ ನಿಮ್ಮ ಪ್ರತಿಭೆಯನ್ನು ಪ್ರಶಂಸಿಸುವಂತೆ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕುಮದ್ವತಿ ಪ್ರಥಮದರ್ಜೆ ಕಾಲೇಜು ಪ್ರಚಾರ್ಯ ಡಾ. ರವೀಂದ್ರ ಮಾತನಾಡಿ, ಪ್ರತಿವರ್ಷ ನಮ್ಮ ವಿದ್ಯಾರ್ಥಿಗಳು ರ‌್ಯಾಂಕ್ ಗಳಿಸುತ್ತಿದ್ದಾರೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಾರೆ ಎಂದರು. ಪ್ರಾಧ್ಯಾಪಕ ಆರ್.ಕೋಟೋಜಿ ರಾವ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.