ಮುಂಬೈ: ಯಶಸ್ಸು ಯಾವಾಗ ಯಾರನ್ನು ಹೇಗೆ ಹುಡುಕಿಕೊಂಡು ಬರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕಠಿಣ ಪರಿಶ್ರಮ ಒಂದಿದ್ದರೆ ಸಾಕು ಯಶಸ್ಸು ನಮ್ಮದಾಗುತ್ತೆ ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವು ನಿದರ್ಶನಗಳಿವೆ. ಆ ಸಾಲಿಗೆ ಖ್ಯಾತ ಯುವ ಉದ್ಯಮಿ ವಿನೀತಾ ಸಿಂಗ್ ಕೂಡ ಸೇರ್ಪಡೆಯಾಗುತ್ತಾರೆ. ಇವರು ಉದ್ಯಮದಲ್ಲಿ ಬೆಳೆದ ಹಾದಿ ಸ್ಪೂರ್ತಿದಾಯಕವಾಗಿದ್ದು, ಅವರ ಸಕ್ಸಸ್ ಸ್ಟೋರಿಯನ್ನು (Success Story) ತಿಳಿಯೋಣ ಬನ್ನಿ.
ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುಪ್ರಸಿದ್ಧ ರಿಯಾಲಿಟಿ ಶೋ ಶಾರ್ಕ್ಟ್ಯಾಂಕ್ ನಾಲ್ಕನೇ ಆವೃತ್ತಿಯ ತೀರ್ಪುಗಾರರಾಗಿ ವಿನೀತಾ ಸಿಂಗ್ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಂಪನಿ ಒಂದರ ಸಹಸಂಸ್ಥಾಪಕಿ ಆಗಿರುವ ವಿನೀತಾ ಅವರು ಬರೋಬ್ಬರಿ 4 ಸಾವಿರ ರೂ. ಕೋಟಿಯ ಒಡತಿ ಎಂದರೆ ನಿಮಗೆ ಸಂಬಲು ಕಷ್ಟವಾಗಬಹುದು. . ಭಾರತದ ಪ್ರಮುಖ ಸೌಂದರ್ಯವರ್ಧಕ ಕಂಪನಿಯಾದ ಶುಗರ್ ಕಾಸ್ಕೆಟಿಕ್ಸ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೂಲತಃ ಗುಜರಾತ್ನ ಆನಂದ್ ಜಿಲ್ಲೆಯವರಾದ ವಿನೀತಾ ಅವರ ತಂದೆ ವೈದ್ಯರಾಗಿದ್ದು, ದೆಹಲಿಯ ಏಮ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಾಲ್ಯದಲ್ಲಿ ಹೆಚ್ಚಿನ ಸಮಯ ಅಜ್ಜಿಯೊಂದಿಗೆ ಕಳೆದ ವಿನೀತಾ ಅವರು 10 ವರ್ಷದವರಿದ್ದಾಗ ತಮ್ಮ ಸ್ನೇಹಿತರೊಂದಿಗೆ ಸಣ್ಣ ಪತ್ರಿಕೆಯನ್ನು ಆರಂಭಿಸಿ ಅದನ್ನು 3 ರೂ.ಗೆ ಮಾರುತ್ತಿದ್ದರು. ಬಾಲ್ಯದಲ್ಲೇ ಉದ್ಯಮದ ಬಗ್ಗೆ ಆಸಕ್ತಿ ಹೊಂದಿದ್ದ ವಿನೀತಾ ಅವರು ಮದ್ರಾಸ್ ಐಐಟಿ ಹಾಗೂ ಅಹಮದಾಬಾದ್ ಐಐಎಂನಲ್ಲಿ ಪದವಿಯನ್ನು ಪಡೆದಿದ್ದಾರೆ.
23 ವರ್ಷದವರಿದ್ದಾಗಲೇ ವಿನೀತಾ ಅವರಿಗೆ ಒಂದು ಕೋಟಿ ರೂ . ಪ್ಯಾಕೇಜ್ಅನ್ನು ಕಂಪನಿ ಆಫರ್ ಮಾಡಿತ್ತು. ಆದರೆ, ಅದನ್ನು ತಿರಸ್ಕರಿಸಿ ತಮ್ಮ ಸ್ವಂತ ಉದ್ಯಮ ಆರಂಭಿಸಿದ ವಿನೀತಾ ಅವರು ಮೊದಲ ಹಂತದಲ್ಲಿ ಮಹಿಳೆಯರ ಒಳುಡುಪಿನ ಉದ್ಯಮವನ್ನು ಪ್ರಾರಂಭಿಸಲು ಮುಂದಾದರು. ಆದರೆ, ಅನುಭವದ ಕೊರತೆ ಹಾಗೂ ಹೂಡಿಕೆದಾರರು ಮುಂದೆ ಬಾರದ ಕಾರಣ ಅವರು ಈ ಉದ್ಯಮಕ್ಕೆ ಕೈ ಹಾಕಲಿಲ್ಲ. ಬಳಿಕ ಕಂಪನಿ ಒಂದರಲ್ಲಿ 10 ಸಾವಿರ ರೂ. ಸಂಬಳಕ್ಕೆ ಸೇರಿಕೊಂಡ ವಿನೀತಾ ಅವರು ಜೀವನ ಸಾಗಿಸುತ್ತಿದ್ದರು. ಆ ಬಳಿಕ 5 ವರ್ಷಗಳ ಕಾಲ ಕಂಪನಿಯನ್ನು ನಡೆಸಿದ್ದರು.
2012ರಲ್ಲಿ ಪತಿ ಕೌಶಿಕ್ ಮುಖರ್ಜಿ ಸಹಾಯದೊಂದಿಗೆ ವಿನೀತಾ ಕಾಸ್ಮೆಟಿಕ್ ಕಂಪನಿ ಒಂದನ್ನು ಆರಂಭಿಸಿದರು. ಯುವ ಸಮೂಹಕ್ಕೆ ಕೈಗೆಟುಕುವ ಉತ್ತಮ ಗುಣಮಟ್ಟದ ಮೇಕಪ್ ಉತ್ಪನ್ನಗಳನ್ನು ತಯಾರಿಸುವತ್ತ ಗಮನಹರಿಸಿದರು. ದಿನಕಳೆದಂತೆ ಇವರ ಯಉತ್ಪನ್ನಗಳಿಗೆ ಹೆಚ್ಚು ಮನ್ನಣೆ ಪಡೆದ ಕಾರಣಕ್ಕೆ ಕಂಪನಿಯು ವೇಗವಾಗಿ ಬೆಳೆಯಲು ಶುರುವಾಯಿತು. ದಂಪತಿಗಳು 2015ರಲ್ಲಿ ಶುಗರ್ ಕಾಸ್ಮೆಟಿಕ್ ಕಂಪನಿಯನ್ನು ಶುರು ಮಾಡಿದರು. ದಿನ ಕಳೆದಂತೆ ಕಂಪನಿಯ ಪ್ರಾಡಕ್ಟ್ಗಳು ಹೆಚ್ಚು ಖ್ಯಾತಿ ಪಡೆದ ಕಾರಣ ವಿನೀತಾ ಅವರು ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಕಂಪನಿ ಬ್ರ್ಯಾಂಡ್ ವ್ಯಾಲ್ಯೂ 4 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.