ಸೊರಬ: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ನಿರಂತರ ಪರಿಶ್ರಮದಿಂದ ಮುನ್ನಡೆಯಬೇಕು. ಹಂತ ಹಂತವಾಗಿ ಪ್ರಗತಿ ಸಾಧಿಸಿದಾಗ ಪ್ರತಿಫಲ ದೊರೆಯುತ್ತದೆ ಎಂದು ಪ್ರಗತಿ ಟ್ರಸ್ಟ್ ಮುಖ್ಯಸ್ಥ ಕಾರ್ತಿಕ್ ಸಾಹುಕಾರ್ ಹೇಳಿದರು.
ಆನವಟ್ಟಿಯಲ್ಲಿ ತಾಲೂಕು ಯುವಜನ ಸಂಘ, ಕನ್ನಡ ಸಾಹಿತ್ಯ ಪರಿಷತ್ ಆನವಟ್ಟಿ ಘಟಕ, ಪ್ರಗತಿ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಉತ್ತಮ ವಿಷಯಗಳನ್ನು ಆಯ್ಕೆ ಮಾಡಿ ಅಧ್ಯಯನ ನಡೆಸಬೇಕು. ಇದರಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಭವಿಷ್ಯದಲ್ಲಿ ಹೆಚ್ಚು ಅವಕಾಶಗಳು ದೊರೆಯುತ್ತವೆ. ಪ್ರತಿ ವರ್ಷವೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ್ ಕರೂದಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಯ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುವ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಎವರಾನ್ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕಿ ಚರಿತಾ ಕಾರ್ತಿಕ್, ಕುಬಟೂರು ಗ್ರಾಮ ಸಮಿತಿ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಎಚ್.ಸಿ.ಸಂಪತ್‌ಕುಮಾರ್, ಬಸವನಗೌಡ ಪಾಟೀಲ್, ನಾಗರಾಜ್ ಹುರುಳಿ, ಮೃತ್ಯುಂಜಯ ಗೌಡ, ಮಹಾಂತೇಶ್, ಖಲಂದರ್ ಸಾಬ್, ಸಲೀಂ ಬಾಷಾ, ಅಜಿತ್‌ಕುಮಾರ್, ಶರತ್, ಸತೀಶ್, ಕೇಶವ ನಾಯ್ಕ, ಅಭಿಲಾಷ್, ರಾಮಚಂದ್ರ ಉಪಸ್ಥಿತರಿದ್ದರು.