ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮದಲ್ಲಿ ರವಿ, ದಯಾನಂದ, ರುದ್ರ , ಬಸವರಾಜು, ಸುಹಾನಾ ಇದ್ದರು.  
ನ್ಯೂಸ್

ಏಳು ಸೂತ್ರ ಅನುಸರಿಸಿದರೆ ಜೀವನದಲ್ಲಿ ಯಶಸ್ಸು

ವಿರಾಜಪೇಟೆ : ಜೀವನದಲ್ಲಿ ಏಳು ಸೂತ್ರಗಳನ್ನು ಪಾಲಿಸಿದರೆ ಯಶಸ್ಸು ಸುಲಭವಾಗಿ ಲಭಿಸುತ್ತದೆ ಎಂದು ಮಡಿಕೇರಿ ಸೆನ್ ಪೊಲೀಸ್ ಠಾಣೆ ಡಿವೈಎಸ್‌ಪಿ ರವಿ ಹೇಳಿದರು.

ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಉದ್ಯೋಗ ಕೋಶ ಸಮಿತಿಯ ಜಂಟಿ ಆಶ್ರಯದಲ್ಲಿ ಆರಂಭಿಸಲಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಕಡುಬಡತನದಿಂದ ಬೆಳೆದು ಎರಡನೇ ಬಾರಿ ಕೆಎಎಸ್ ಪರೀಕ್ಷೆಯಲ್ಲಿ ಯಶಸ್ವಿಯಾದೆ. ಪ್ರತಿಭೆ ಇಲ್ಲದಿದ್ದರೂ ಪರಿಶ್ರಮ ಪಟ್ಟರೆ ಯಶಸ್ಸು ಸಾಧಿಸಬಹುದು. ಜೀವನದಲ್ಲಿ ಏಳುಸೂತ್ರಗಳನ್ನು ಪಾಲಿಸಿದರೆ ಯಶಸ್ಸು ಸುಲಭವಾಗಿ ಲಭಿಸುತ್ತದೆ. ಸ್ವಯಂ ಶಿಸ್ತು, ಸ್ವಯಂ ಪ್ರೇರಣೆ, ನಿರಂತರತೆ, ಬೇರೆಯವರಿಗೆ ಹೋಲಿಸಿಕೊಳ್ಳದೆ ಇರುವುದು, ನೆಪಗಳನ್ನು ಹೇಳದಿರುವುದು, ಯಾವುದನ್ನು ಓದಬೇಕು, ಯಾವುದನ್ನು ಓದಬಾರದೆಂದು ತೀರ್ಮಾನಿಸುವುದು, ಸಫಲರಾಗಿರುವ ಅಧಿಕಾರಿಗಳನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮರದೂರಿನ ಲಾ ಸಾಲೆಟ್ ಪದವಿಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಸುಹಾನಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರ ಮನಸ್ಥಿತಿ ಹೇಗಿರಬೇಕು ಹಾಗೂ ಸಮಯ ನಿರ್ವಹಣೆ, ಸ್ಪರ್ಧಾತ್ಮಕ ಪರೀಕ್ಷೆಗಳ ಕೌಶಲಗಳ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ ಮಾತನಾಡಿದರು. ಸಂಯೋಜಕ ರುದ್ರ, ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ಬಸವರಾಜು ಹಾಗೂ ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.