ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕರ್ನಾಟಕ ಗೃಹ ಮಂಡಳಿ ಆಯುಕ್ತ ಕೆ.ಎ.ದಯಾನಂದ್ ಅವರು ಸಮನ್ವಯ ಟ್ರಸ್ಟ್‌ನ ಗೀತೆ ಬಿಡುಗಡೆಗೊಳಿಸಿದರು. ಎಸ್.ರುದ್ರೇಗೌಡ, ಅನಿಲ್ಕುಮಾರ್ ಭೂಮರಡ್ಡಿ, ಚಂದ್ರಪ್ಪ ಗುಂಡಪಲ್ಲಿ, ಡಾ. ರಜನಿ ಪೈ, ದುರ್ಗಪ್ಪ ಅಂಗಡಿ, ಎಸ್.ವಿ.ವೆಂಕಟೇಶ್,ಸಮನ್ವಯ ಕಾಶಿ, ಶಶಿಕುಮಾರ್, ನಂದಿನಿ ಇದ್ದರು. 
ನ್ಯೂಸ್

ನಿರಂತರ ಶ್ರಮದಿಂದ ಜೀವನದಲ್ಲಿ ಯಶಸ್ಸು

ಶಿವಮೊಗ್ಗ: ಬುದ್ಧಿವಂತಿಕೆ ಒಂದೇ ಜೀವನದ ಯಶಸ್ಸಿಗೆ ಕಾರಣವಲ್ಲ. ಬುದ್ಧಿವಂತಿಕೆಯನ್ನು ಯಾವಾಗ, ಯಾವ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂಬುದು ಗೊತ್ತಿರಬೇಕು. ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಕರ್ನಾಟಕ ಗೃಹ ಮಂಡಳಿ ಆಯುಕ್ತ ಕೆ.ಎ.ದಯಾನಂದ್ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ಸಮನ್ವಯ ಸಂಸ್ಥೆಯ 20ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಸಮನ್ವಯ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭರವಸೆಯ ಹೆಜ್ಜೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಗುರಿ ನಿಗದಿಪಡಿಸಿಕೊಂಡು ಅದಕ್ಕೆ ಶ್ರಮ ಹಾಕಬೇಕು. ಆ ಶ್ರಮಕ್ಕೆ ನಿರಂತರವಾಗಿ ಫಾಲೋ ಅಪ್ ಇರಬೇಕು. ಆಗ ಐಕ್ಯೂ(ಬುದ್ಧಿವಂತಿಕೆ) ಕಡಿಮೆ ಇದ್ದರೂ ಯಶಸ್ಸು ತಂದುಕೊಡುತ್ತದೆ. ಜೀವನದಲ್ಲಿ ಗುರಿ ಮತ್ತು ಗುರು ಇರಬೇಕು. ಏನನ್ನು ಸಾಧಿಸಬೇಕು ಅಥವಾ ಗುರಿ ತಲುಪಬೇಕು ಎಂಬುದನ್ನು ಮೊದಲು ನಮಗೆ ನಾವೇ ಗೊತ್ತು ಮಾಡಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.

ಎಎಸ್‌ಪಿ ಅನಿಲ್ಕುಮಾರ್ ಭೂಮರಡ್ಡಿ, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಅಮೃತ್ ನೋನಿ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀನಿವಾಸಮೂರ್ತಿ ಮಾತನಾಡಿದರು. ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಎಂಎಲ್ಸಿ ಎಸ್.ರುದ್ರೇಗೌಡ, ಕಟೀಲ್ ಅಶೋಕ್ ಪೈ ಸ್ಮಾರಕ ಸಮೂಹ ಶಿಕ್ಷಣ ಸಂಸ್ಥೆ ನಿರ್ದೇಶಕಿ ಡಾ. ರಜನಿ ಪೈ, ಕೃಷಿಕ ದುರ್ಗಪ್ಪ ಅಂಗಡಿ, ಉದ್ಯಮಿ ಎಸ್.ವಿ.ವೆಂಕಟೇಶ್ ಉಪಸ್ಥಿತರಿದ್ದರು.