ಹೊಸನಗರ: ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಆದರೆ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯ. ಬರೀ ವಿದ್ಯೆ ಇದ್ದರೆ ಸಾಲದು ಸನ್ನಡತೆ, ಸಂಸ್ಕಾರ, ವಿವೇಕವೂ ಇರಬೇಕು ಎಂದು ನಿವೃತ್ತ ಪ್ರಾಚಾರ್ಯ ವಂದಗದ್ದೆ ಚಂದ್ರಮೌಳಿ ಹೇಳಿದರು.
ಕಾರಣಗಿರಿಯಲ್ಲಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗ ಮತ್ತು ದಿನೇಶ್ ಜೋಷಿ ಫೌಂಡೇಶನ್ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವೇಕಾನಂದರು ಹೇಳಿದಂತೆ ಯುವಕರೇ ದೇಶದ ಶಕ್ತಿ. ಯುವಶಕ್ತಿ ಮನಸ್ಸು ಮಾಡಿದರೆ ದೇಶವನ್ನು ವಿಶ್ವ ಗುರುವನ್ನಾಗಿ ಮಾಡಬಹುದು ಎಂದರು.
ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ. ಆದರೆ ಸಾಧನೆಯ ಹಾದಿ ಸುಗಮವಲ್ಲ. ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ. ಓದಿನ ಜತೆಗೆ ಪಾಲಕರು, ಗುರುಹಿರಿಯರಿಗೆ ಗೌರವ ನೀಡುವುದನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದು ಪತ್ರಕರ್ತ ಮ.ಸ.ನಂಜುಂಡಸ್ವಾಮಿ ತಿಳಿಸಿದರು.
ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮಾತನಾಡಿ, ಮಕ್ಕಳಿಗೆ ಪಾಲಕರು ತಮ್ಮ ಸರ್ವಸ್ವವನ್ನೂ ಧಾರೆ ಎರೆಯುತ್ತಾರೆ. ಅದಕ್ಕೆ ತಕ್ಕಂತೆ ಮಕ್ಕಳು ಪಾಲಕರಿಗೆ ಮತ್ತು ಊರಿಗೆ ಕೀರ್ತಿ ತರುವಂತೆ ಸಾಧನೆ ಮಾಡಬೇಕು ಎಂದರು.
ಹೊಸನಗರ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಯಲ್ಲಿ ಶೇ.95ಕ್ಕೂ ಹೆಚ್ಚು ಅಂಕಗಳಿಸಿದ ಮಕ್ಕಳು, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ 50ಕ್ಕೂ ಹೆಚ್ಚು ಪ್ರತಿಭಾವಂತರು, ದಂತ ವೈದ್ಯಕೀಯ ಶಿಕ್ಷಣದಲ್ಲಿ 5 ಚಿನ್ನದ ಪದಕ ಪಡೆದ ಕಾರಣಗಿರಿಯ ಸುಮನ್, 82ರ ಇಳಿವಯಸ್ಸಿನಲ್ಲೂ ಅನೇಕ ಕಲೆ, ಹಾಡುಗಾರಿಕೆ ಇನ್ನೂ ಅನೇಕ ಪ್ರತಿಭೆ ಹೊಂದಿರುವ ಪಾರ್ವತಮ್ಮ ಅವರನ್ನು ಸನ್ಮಾನಿಸಲಾಯಿತು.
ಗ್ರಾಮಭಾರತಿ ಟ್ರಸ್ಟ್ ಗೌರಾವಾಧ್ಯಕ್ಷ ಎನ್.ಡಿ.ನಾಗೇಂದ್ರ ರಾವ್, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಕೆ.ಎಸ್.ನಳಿನಚಂದ್ರ, ಬದರಿನಾಥ್, ಕೆ.ಪಿ.ಕೃಷ್ಣಮೂರ್ತಿ, ವಿನಯ್ ಹೆಗಡೆ, ವಿನಾಯಕ ಪ್ರಭು, ಹನಿಯ ಗುರುಮೂರ್ತಿ ಇದ್ದರು.