ಶಿವಮೊಗ್ಗದಲ್ಲಿ ವೃತ್ತಿ-ಪ್ರವೃತ್ತಿ ಹಾಗೂ ಜೀವನ ಸಮತೋಲನ ತರಬೇತಿ ಕಾರ್ಯಾಗಾರವನ್ನು ವೈದ್ಯೆ ಶುಭ್ರತಾ ಉದ್ಘಾಟಿಸಿದರು. ಬಿ.ವಿ.ಲಕ್ಷ್ಮೀದೇವಿ, ಎಚ್.ಎಸ್.ಪುಷ್ಪಲತಾ, ಜಿ.ವಿಜಯಕುಮಾರ್, ಶಿಲ್ಪಾ ಗೋಪಿನಾಥ್, ಸಹನಾ ಚೇತನ್ ಇದ್ದರು. 
ನ್ಯೂಸ್

ಇಷ್ಟದ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ: ವೈದ್ಯೆ ಶುಭ್ರತಾ

ಶಿವಮೊಗ್ಗ: ಮಹಿಳೆಯರು ಇಷ್ಟವಿರುವ ಉದ್ಯಮ ಕ್ಷೇತ್ರದಲ್ಲಿ ನಿರಂತರ ಪರಿಶ್ರಮ ವಹಿಸಿ ಯಶಸ್ಸು ಸಾಧಿಸಬೇಕು ಎಂದು ವೈದ್ಯೆ ಶುಭ್ರತಾ ಹೇಳಿದರು.

ನಗರದ ಮಥುರಾ ಪ್ಯಾರಡೈಸ್‌ನಲ್ಲಿ ಗುರುವಾರ ಸ್ವೇದ ಮಹಿಳಾ ಉದ್ಯಮಿಗಳ ಸಂಘದಿಂದ ಮಹಿಳಾ ಉದ್ಯಮಿಗಳಿಗೆ ಆಯೋಜಿಸಿದ್ದ ವೃತ್ತಿ-ಪ್ರವೃತ್ತಿ ಹಾಗೂ ಜೀವನ ಸಮತೋಲನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಸಾಂಸಾರಿಕ ಜೀವನದಲ್ಲಿ ತನ್ನ ಗುರುತೇ ಕಳೆದುಹೋಗುವಂತೆ ಮಗ್ನಳಾಗಿದ್ದಾಳೆ. ಜೀವನ ಒಮ್ಮೆ ತಿರುಗಿ ನೋಡಿದಾಗ ಆಕೆಗೆ ಅದರ ಅರಿವಾಗುತ್ತದೆ. ಸಾಂಸಾರಿಕ ಜೀವನದ ಜತೆ ಜತೆಗೆ ನಿಮ್ಮ ವೃತ್ತಿ-ಪ್ರವೃತ್ತಿಯಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಯಶಸ್ಸು ಸಾಧಿಸಬೇಕು. ನಿಮ್ಮ ವ್ಯಕ್ತಿತ್ವ ಗುರುತು ಕಳೆದುಹೋಗದಂತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ. ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ಮಾತನಾಡಿ, ಉದ್ಯಮಿಯಾದ ಮಹಿಳೆ ತನ್ನ ಮನೆ, ವೃತ್ತಿ ಹಾಗೂ ಪ್ರವೃತ್ತಿ ಎಲ್ಲವನ್ನೂ ನಿಭಾಯಿಸಿಕೊಂಡು ಜೀವನದ ಸಮತೋಲನ ಕಾಯ್ದುಕೊಳ್ಳಲು ಇಂತಹ ತರಬೇತಿ ಕಾರ್ಯಕ್ರಮ ಅವಶ್ಯಕ ಎಂದರು.
ನಮ್ಮ ಶಕ್ತಿ, ದೌರ್ಬಲ್ಯಗಳ ಅರಿವು, ಭಾವನೆಗಳ ನಿರ್ವಹಣೆ, ಇತರರ ಬಗ್ಗೆ ಸಹಾನುಭೂತಿ, ಸೃಜನಾತ್ಮಕ ಚಿಂತನೆಗಳ ಬೆಳವಣಿಗೆ, ಮನೆಯವರೊಡನೆ, ವೃತ್ತಿಯಲ್ಲಿ, ಸಮಾಜದಲ್ಲಿ ಪರಿಣಾಮಕಾರಿ ಸಂವಹನ, ಅಂತರ ವ್ಯಕ್ತಿಯ ಕೌಶಲಗಳನ್ನು ನೀಡುವ ಇಂತಹ ತರಬೇತಿಗಳು ಮಹಿಳಾ ಉದ್ಯಮಿಗಳನ್ನು ಉತ್ತಮ ಶಿಲ್ಪಗಳನ್ನಾಗಿ ರೂಪಿಸುತ್ತವೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್, ಖಜಾಂಚಿ ಸಹನಾ ಚೇತನ್, ತರಬೇತುದಾರ ಭಾರತಿ, ಕಿರಣ್ ಉಪಸ್ಥಿತರಿದ್ದರು. ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗ್ರಾಮಾಂತರ ಪ್ರದೇಶದಿಂದ ಮಹಿಳಾ ಉದ್ಯಮಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಉದ್ಯಮದಲ್ಲಿ ಯಶಸ್ಸು ಸಾಧಿಸಲು ಆರೋಗ್ಯ ಹಾಗೂ ಸಮಯದ ಸಮರ್ಪಕ ನಿರ್ವಹಣೆ ಅತ್ಯಂತ ಮುಖ್ಯ. ಉತ್ತಮ ಆರೋಗ್ಯವೇ ಉತ್ಸಾಹ ಮತ್ತು ಕರ್ತವ್ಯ ನಿಷ್ಠೆಯ ಮೆಟ್ಟಿಲುಗಳು. ಸಮಯ ಸದ್ಬಳಕೆಯಾದಾಗ ಕೆಲಸಗಳಲ್ಲಿ ಸಮತೋಲನ ಮತ್ತು ಸೃಜನಶೀಲತೆ ಮೇಲೆ ಒತ್ತು ನೀಡಬಹುದು.- ಎಚ್.ಎಸ್.ಪುಷ್ಪಲತಾ, ಉಪನ್ಯಾಸಕಿ