ನ್ಯೂಸ್

ಯಾತ್ರಿಕರಿಗೆ ಸಬ್ಸಿಡಿ: ಅರ್ಜಿ ಸಲ್ಲಿಕೆ, ಹಣ ಪಾವತಿ ಸರಳೀಕರಣ

ಮೃತ್ಯುಂಜಯ ಕಪಗಲ್

ಬೆಂಗಳೂರು: ದೇಶದ ಪ್ರಮುಖ ಪುಣ್ಯ ಸ್ಥಳಗಳಿಗೆ ರಾಜ್ಯದಿಂದ ಮೊದಲ ಬಾರಿ ತೆರಳುವ ಯಾತ್ರಿಕರಿಗೆ ರಾಜ್ಯ ಸರ್ಕಾರ ಕೊಡ ಮಾಡುತ್ತಿರುವ ಸಹಾಯಧನ ವ್ಯವಸ್ಥೆಯನ್ನು ಸರಳ, ಅರ್ಜಿ ಸಲ್ಲಿಕೆ ವಿಧಾನ ಸುಲಭಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಹಾಗೆಯೇ ಈ ಮೊದಲು ಹೊರಡಿಸಿದ್ದ ಮೂರು ಪ್ರತ್ಯೇಕ ಮಾರ್ಗಸೂಚಿಗಳಲ್ಲಿನ ನ್ಯೂನತೆಗಳನ್ನು ಹೋಗಲಾಡಿಸಿ, ಸಬ್ಸಿಡಿ ಅಪೇಕ್ಷಿತ ಯಾತ್ರಾರ್ಥಿಗಳ ಸಮಸ್ಯೆಯನ್ನೂ ಬಗೆಹರಿಸಿದೆ.

ಅರ್ಜಿ ಸಲ್ಲಿಕೆ, ಸಹಾಯಧನ ಪಾವತಿ ಪ್ರಕ್ರಿಯೆ ಸರಳ, ಪಾರದರ್ಶಕ ಹಾಗೂ ಸುಲಭವಾಗಿಸಲು ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಇಲಾಖೆ ವೆಬ್‌ಸೈಟ್‌ನಲ್ಲಿ ಆಸಕ್ತ ಯಾತ್ರಿಕರು ವಿವರಗಳನ್ನು ಪಡೆಯಬಹುದಾಗಿದೆ.

ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡ ಯಾತ್ರಿಕರಿಗೆ ತಲಾ 30 ಸಾವಿರ ರೂ., ಚಾರಧಾಮ್ (ಬದರಿನಾಥ್, ಕೇದಾರನಾಥ್, ಗಂಗೋತ್ರಿ, ಯಮನೋತ್ರಿ)ಗೆ ಮೊದಲ ಬಾರಿ ಯಾತ್ರೆ ಕೈಗೊಳ್ಳುವವರಿಗೆ 20 ಸಾವಿರ ರೂ. ಹಾಗೂ ಕಾಶಿ ಯಾತ್ರೆ ಕೈಗೊಂಡ 30 ಸಾವಿರ

ಮಾರ್ಗಸೂಚಿ ಪರಿಷ್ಕೃತ

ಯಾತ್ರಾರ್ಥಿಗಳಿಗೆ ಒಂದು ಬಾರಿ ಮಾತ್ರ ಐದು ಸಾವಿರ ಸಹಾಯಧನವನ್ನು ಸರ್ಕಾರ ನೀಡಲಿದೆ. ಹಿಂದಿನ ಸರ್ಕಾರದ ಸಹಾಯಧನವನ್ನು ಯಥಾವತ್ ಮುಂದುವರಿಸಿದೆ. ಆದರೆ ಈವರೆಗೆ ಅಗತ್ಯ ದಾಖಲೆಗಳ ಸಹಿತ ನೇರವಾಗಿ ಅರ್ಜಿ ಸಲ್ಲಿಸಬೇಕಾಗಿತ್ತು.

ಇನ್ನು ಮುಂದೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಜತೆಗೆ ಆಯ್ಕೆಯಾದ ಯಾತ್ರಿಕರ ಬ್ಯಾಂಕ್ ಖಾತೆಗೆ ಸಹಾಯಧನ ನಗದು ನೇರ ವರ್ಗಾವಣೆಯಾಗಲಿದೆ. ಕಚೇರಿಗೆ ಅಲೆದಾಡುವುದನ್ನು ಸರ್ಕಾರ ತಪ್ಪಿಸಿದೆ.

ಸಹಾಯಧನ ಪಾವತಿ ವ್ಯವಸ್ಥೆಯನ್ನು ‘ಮಾನಸ ಸರೋವರ ಭಕ್ತಾದಿಗಳಿಗೆ ನೆರವು’ ಲೆಕ್ಕ ಶೀರ್ಷಿಕೆಯಡಿ ನಿರ್ವಹಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಇಲಾಖೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಷ್ಕೃತ ಮಾರ್ಗಸೂಚಿ, ಅರ್ಜಿ ಸಲ್ಲಿಕೆ ವಿಧಾನದ ಬಗ್ಗೆ ಯಾತ್ರಿಕರು ತಿಳಿದುಕೊಳ್ಳಬಹುದಾಗಿದೆ ಎಂದು ಕಂದಾಯ ಇಲಾಖೆ (ಧಾರ್ಮಿಕ ದತ್ತಿ) ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.