ನವದೆಹಲಿ: ನಿರಂತರ ಪೆಟ್ರೋಲ್ ದರ ಏರಿಕೆ ವಿಚಾರವಾಗಿ ಬಿಜೆಪಿ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ತಮ್ಮದೇ ಪಕ್ಷವನ್ನು ಕಟುವಾಗಿ ಟೀಕಿಸಿದ್ದಾರೆ.
ನೇಪಾಳದ ಸೀತಾ ಮತ್ತು ಲಂಕಾದ ರಾವಣನಿಗಿಂತ ರಾಮನ ಭಾರತದಲ್ಲೇ ಪೆಟ್ರೋಲ್ ಬೆಲೆ ಏರುಗತಿಯಲ್ಲಿ ಸಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ. ನಿನ್ನೆ ಮಂಡನೆಯಾದ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲ್ ಮೇಲೆ 2.5 ರೂಪಾಯಿ ಮತ್ತು ಡೀಸೆಲ್ ಮೇಲೆ 4 ರೂಪಾಯಿ ಕೃಷಿ ಮೂಲ ಸೌಕರ್ಯ ಸೆಸ್ ಹೆಚ್ಚಳ ಮಾಡಿರುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮದೇ ಪಕ್ಷದ ವಿರುದ್ಧ ನೀಡಿರುವ ಹೇಳಿಕೆ ಮುಜುಗರಕ್ಕೀಡಾಗುವಂತೆ ಮಾಡಿದೆ.
ಇಂದು (ಫೆ.2 ಮಂಗಳವಾರ) ತಮ್ಮ ಟ್ವಿಟರ್ನಲ್ಲಿ ಸುಬ್ರಮಣಿಯನ್ ಸ್ವಾಮಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 93 ರೂ. ಇದೆ. ಸೀತೆಯ ನೇಪಾಳದಲ್ಲಿ 53 ಮತ್ತು ರಾವಣನ ಲಂಕಾದಲ್ಲಿ 51 ರೂಪಾಯಿ ಇದೆ ಎಂದಿದ್ದಾರೆ. ಈ ಮೂಲಕ ತಮ್ಮ ಪಕ್ಷದ ಆಡಳಿತ ವೈಖರಿಯನ್ನು ಟೀಕಿಸಿದ್ದಾರೆ.
ಕಳೆದ ಒಂದು ತಿಂಗಳಿಂದಲೂ ಪೆಟ್ರೋಲ್ ಏರುಗತಿಯಲ್ಲೇ ಸಾಗಿದೆ. ಒಮ್ಮೆಯು ಸಹ ಕಡಿಮೆಯಾಗಿಲ್ಲ. ಅಲ್ಲದೆ, ನಿನ್ನೆ ಬಜೆಟ್ನಲ್ಲಿ ಇಂಧನ ಮೇಲಿನ ಕೃಷಿ ಮೂಲ ಸೌಕರ್ಯ ಮೇಲಿನ ಸೆಸ್ ಹೆಚ್ಚಳದಿಂದ ಇಂಧನ ದರ ಮತ್ತಷ್ಟು ದುಬಾರಿಯಾಗಬಹುದೆಂದು ಅಂದಾಜಿಸಲಾಗಿದೆ.
ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಹೇರುವ ಪರಿಣಾಮವಾಗಿ, ಮೂಲ ಅಬಕಾರಿ ಸುಂಕ (ಬಿಇಡಿ) ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್‌ಎಇಡಿ) ದರಗಳನ್ನು ಇಳಿಸಲಾಗಿದೆ. ಇದರಿಂದ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಹೊರೆ ಆಗುವುದಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. (ಏಜೆನ್ಸೀಸ್)