ಪಿರಿಯಾಪಟ್ಟಣ ತಾಲೂಕಿನ ಚಿಕ್ಕನೇರಳೆ ಗ್ರಾಮಕ್ಕೆ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಸುರೇಂದ್ರ ಮೂರ್ತಿ, ಡಿ.ಬಿ.ಸುನೀಲ್ ಕುಮಾರ್, ವೈ.ಪ್ರಸಾದ್, ಡಾ.ಸೋಮಯ್ಯ, ವೆಂಕಟೇಶ್ ಮತ್ತಿತರರಿದ್ದರು. 
ನ್ಯೂಸ್

ಮಳೆ ಹಾನಿ ವರದಿ ಶೀಘ್ರ ಸಲ್ಲಿಸಿ

ವಸಂತಕುಮಾರ್ ಬಿ

ಪಿರಿಯಾಪಟ್ಟಣ: ತಾಲೂಕಿನಲ್ಲಿ ಮಳೆಯಿಂದ ಸಂಭವಿಸಿರುವ ಹಾನಿ ಕುರಿತು ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಸೂಚನೆ ನೀಡಿದರು.

ತಾಲೂಕಿನಲ್ಲಿ ಕಳೆದೊಂದು ವಾರದಿಂದ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಚಿಕ್ಕನೇರಳೆ ಗ್ರಾಮದಲ್ಲಿ ಪರಿಶೀಲನೆ ನಡೆಸಿ ಮಾತನಾಡಿ, ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆಯಾಗಿದ್ದು ಮೇ ತಿಂಗಳಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿದೆ. ಕೆಲವು ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಕೆರೆಕಟ್ಟೆಗಳು ತುಂಬಿ ಕೋಡಿ ಹರಿದು ರೈತರ ಬೆಳೆ ನಾಶವಾಗಿರುವುದಾಗಿ ವರದಿಗಳು ಬಂದಿವೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಮಳೆ ಹಾನಿಯ ಬಗ್ಗೆ ಪರಿಪೂರ್ಣವಾಗಿ ಮಾಹಿತಿ ಸಂಗ್ರಹಿಸಿ ನಷ್ಟದ ಪ್ರಮಾಣದ ಬಗ್ಗೆ ವರದಿ ನೀಡಬೇಕು ಎಂದು ಸೂಚಿಸಿದರು.

ಕಳೆದ ಆರು ತಿಂಗಳಿನಿಂದ ಬಿರು ಬಿಸಿಲಿನಿಂದ ಬೆಂದಿದ್ದ ತಾಲೂಕಿನ ಜನತೆ ಆಶಾದಾಯಕವಾದ ಮಳೆಯಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದಾಗಿ ಬೋರ್ವೆಲ್ ಗಳಲ್ಲಿ ಸಮರ್ಪಕವಾಗಿ ನೀರು ದೊರಕದೆ ರೈತರು ತೊಂದರೆ ಅನುಭವಿಸಿದ್ದರು. ಆದರೆ ಈಗ ಬೀಳುತ್ತಿರುವ ಮಳೆಯಿಂದ ಅಂತರ್ಜಲ ಮಟ್ಟವನ್ನು ಸುಧಾರಣೆ ಆಗಲಿದೆ ಎಂದರು. ಹವಾಮಾನ ಇಲಾಖೆಯ ಪ್ರಕಾರ ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಬೀಳಲಿದೆ ಎಂಬ ಮುನ್ಸೂಚನೆಯಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರಿ ಆಗಲಿದೆ ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದರು.
ತಾಲೂಕಿನಲ್ಲಿ ರಸಗೊಬ್ಬರ, ಬಿತ್ತನೆ ಬೀಜಗಳ ಕೊರತೆ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಎಚ್‌ಡಿಕೆ ಭೇಟಿ ಗಿಮಿಕ್: ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ನಿಮಿತ್ತ ಭೇಟಿ ನೀಡಿದ್ದಾರೆಯಷ್ಟೇ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಉಂಟಾಗಬಾರದು ಎನ್ನುವುದೇ ಈ ಭೇಟಿಯ ಉದ್ದೇಶವಾಗಿದೆ . ಎಚ್‌ಡಿಕೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದು ಚುನಾವಣೆಯ ಗಿಮಿಕ್ ಅಷ್ಟೇ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸುರೇಂದ್ರ ಮೂರ್ತಿ, ತಾಪಂ ಇಒ ಡಿ.ಬಿ.ಸುನೀಲ್ ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್, ಪಶುಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಲೋಕೋಪಯೋಗಿ ಇಲಾಖೆಯ ಎಇಇ ವೆಂಕಟೇಶ್ ಸೇರಿದಂತೆ ಮತ್ತಿತರರು ಇದ್ದರು.