ಬೆಂಗಳೂರು: ಗಾಂಜಾ ಸೇವಿಸಿಲ್ಲ ಎನ್ನುವುದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯಲ್ಲಿ ಸಾಬೀತಾದರು ಸಹ ಅದಕ್ಕೆ ವಿರುದ್ಧವಾಗಿ ದೋಷಾರೋಪ ಪಟ್ಟಿ ಸಲ್ಲಿಸುವ ಮೂಲಕ ಯುವಕರಿಬ್ಬರನ್ನು ಸಂಕಷ್ಟದ ದವಡೆಗೆ ನೂಕಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಇಬ್ಬರೂ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಗೃಹ ಇಲಾಖೆಗೆ ನಿರ್ದೇಶನ ನೀಡಿದೆ.
ಗಾಂಜಾ ಸೇವನೆ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ನಗರದ ವರ್ತೂರು ನಿವಾಸಿಗಳಾದ ಹನುಮಂತ ಮತ್ತು ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎರಡನೇ ಎಸಿಎಂಎಂ ನ್ಯಾಯಾಲಯದಲ್ಲಿ ಬಾಕಿಯಿದ್ದ ವಿಚಾರಣಾ ಪ್ರಕ್ರಿಯೆಯನ್ನೂ ರದ್ದುಪಡಿಸಿದೆ. ಅರ್ಜಿದಾರರ ವಿರುದ್ಧ ಎಫ್‌ಎಸ್‌ಎಲ್ ವರದಿಯಲ್ಲಿ ಗಾಂಜಾ ಅಂಶಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ ಅರ್ಜಿದಾರರು ಗಾಂಜಾ ಸೇವಿಸಿರುವುದು ಎಫ್‌ಎಸ್‌ಎಲ್ ವರದಿಯಿಂದ ದೃಢಪಟ್ಟಿದೆ ಎಂದು ಪ್ರಕರಣದ ತನಿಖಾಧಿಕಾರಿಯಾಗಿದ್ದ 2019ರಲ್ಲಿ ಪ್ರೊಬೆಷನರಿ ಸೇವೆಯಲ್ಲಿದ್ದ ವರ್ತೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ರಾಜಕುಮಾರ್ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆ ವರದಿಯನ್ನು ಅಂದಿನ ಇನ್‌ಸ್ಪೆಕ್ಟರ್ ಒಪ್ಪಿದ್ದಾರೆ. ಇದು ಕಾನೂನು ಬಾಹಿರ ಕ್ರಮ.
ಅರ್ಜಿದಾರ ವಿದ್ಯಾರ್ಥಿಗಳನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವರ್ತೂರು ಪೊಲೀಸ್ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಹೈಕೋರ್ಟ್ ಆದೇಶಿಸಿದೆ.
ಸುತ್ತೋಲೆ ಹೊರಡಿಸಿ
ಯಾವ ವ್ಯಕ್ತಿ ತನ್ನ ಬಳಿ ಮಾದಕ ವಸ್ತುಗಳನ್ನು ಹೊಂದಿರುತ್ತಾನೋ ಆತ ಸಿಕ್ಕಿಬಿದ್ದಲ್ಲಿ ಆ ಕೂಡಲೇ ಅಂತವರನ್ನು ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 42ರಲ್ಲಿ ವ್ಯಾಖ್ಯಾನಿಸಲಾಗಿರುವ ಅಧಿಕಾರಿಗಳಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಬಕಾರಿ, ನಾರ್ಕೋಟಿಕ್, ಕಸ್ಟಮ್ಸ್, ಕಂದಾಯ ವಿಚಕ್ಷಣಾ, ಕೇಂದ್ರ ಸರ್ಕಾರದ ಅಧೀನ ಸಂಸದೀಯ ಪಡೆಯ ಮತ್ತು ಸಶಸ್ತ್ರ ಪಡೆ, ಪೊಲೀಸರು, ಡ್ರಗ್ ಕಂಟ್ರೋಲ್ ಇನ್ನಿತರ ಇಲಾಖೆಗಳ ಗೆಜೆಟೆಡ್ ಅಧಿಕಾರಿಗಳು ಅಥವಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು.
ಆದರೆ ಅಧಿಕಾರಿಗಳು ಈ ನಿಯಮ ಅನುಸರಿಸದೆ ಹಲವು ಪ್ರಕರಣಗಳು ಕೋರ್ಟ್ ಮುಂದೆ ಬರುತ್ತಿವೆ. ಆದ್ದರಿಂದ, ಎನ್‌ಡಿಪಿಎಸ್ ಸೆಕ್ಷನ್ 50 ಮತ್ತು 52 ನಿಯಮ ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಡಿಜಿಪಿ ಅಥವಾ ಗೃಹ ಇಲಾಖೆ ಸುತ್ತೋಲೆ ಹೊರಡಿಸಬೇಕು ಎಂದು ಹೇಳಿದೆ.
ಗಾಂಜಾ ಎಲ್ಲಿದೆ, ಏನಾಯಿತು ?
ಪ್ರಕರಣದಲ್ಲಿ ಅರ್ಜಿದಾರರಿಂದ 15 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ, ವಶ ಪಡಿಸಿಕೊಂಡಿರುವ ಗಾಂಜಾ ಎಲ್ಲಿದೆ, ಏನಾಯಿತು ಎನ್ನುವುದು ಬಹಿಂಗವಾಗಿಲ್ಲ. ಒಮ್ಮೆ ಮಾದಕ ವಸ್ತುವನ್ನು ವಶಪಡಿಸಿಕೊಂಡರೆ, ಅದರ ಪಂಚನಾಮೆ, ದಾಸ್ತಾನು ಮಾಡಬೇಕು. ಅದರ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಬೇಕು. ಪ್ರಕರಣದಲ್ಲಿ 15 ಗ್ರಾಂ ಪಂಚನಾಮೆ ಮಾಡಲಾಗಿದೆ ಎಂಬುದು ನಂಬುವಂತಹದ್ದಲ್ಲ. ಅರ್ಜಿದಾರರು ಗಾಂಜಾ ಸೇವನೆ ಮಾಡಿದ್ದರು ಎನ್ನುವುದೂ ಸಹ ಸಮರ್ಥನೀಯವಲ್ಲ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ.