ನ್ಯೂಸ್

ಇ.ಡಿ.ಗೆ ಹೆಚ್ಚುವರಿ ದಾಖಲೆ ಸಲ್ಲಿಕೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಮೊತ್ತದ ಹಗರಣ ಸಂಬಂಧ ದೂರುದಾರ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರು ಗುರುವಾರ ಹೆಚ್ಚುವರಿ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿದ್ದಾರೆ.

ನಿಗಮದ ಹಣವನ್ನು ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಹೈದರಾಬಾದ್‌ನಲ್ಲಿರುವ ಖಾಸಗಿ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿದ್ದ ಪ್ರೈವೇಟ್ ಕಂಪನಿಗಳ ಹೆಸರಿಗೆ 89.62 ಕೋಟಿ ರೂ. ಹಣ ವರ್ಗಾವಣೆ ಸಂಬಂಧ ಇ.ಡಿ.ಗೆ ಕಳೆದ ಜೂ.6ರಂದು ಎನ್.ಆರ್. ರಮೇಶ್ ದೂರು ಸಲ್ಲಿಸಿದ್ದರು. ಇದೀಗ 104 ಪುಟಗಳ ಹೆಚ್ಚುವರಿ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರಿಸಿದ್ದಾರೆ.

ದೂರಿನೊಂದಿಗೆ ಒದಗಿಸಿರುವ ಹೆಚ್ಚುವರಿ ದಾಖಲೆಗಳನ್ನು ಪರಿಶೀಲಿಸಿ 187 ಕೋಟಿ ರೂ. ಮೊತ್ತದ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಸಿಎಂ ಸಿದ್ಧರಾಮಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ಅವರ ಆಪ್ತರಾದ ನಾಗರಾಜ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್ ಜಿ ದುರಗಣ್ಣನವರ್, ಯೂನಿಯನ್ ಬ್ಯಾಂಕ್ ಆ್ ಇಂಡಿಯಾದ ಎಂ.ಜಿ.ರಸ್ತೆ ಶಾಖೆಯ ಮುಖ್ಯ ವ್ಯವಸ್ಥಾಪಕ ಶುಚಿಸ್ಮಿತಾ ಸೇರಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿತರರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಎನ್.ಆರ್. ರಮೇಶ್ ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದಾರೆ.