ಐಎನ್‌ಎಸ್‌ ಮಾಲ್ವಾಣ್‌  
ನ್ಯೂಸ್

ಸಬ್‌ಮರೀನ್‌ಗಳ ಬೇಟೆಗಾರ ಐಎನ್‌ಎಸ್‌ ಮಾಲ್ವಾಣ್‌ ನೌಕಾಸೇನೆಗೆ ಸೇರ್ಪಡೆ

ಸುಭಾಸ ಹೆಗಡೆ ಧೂಪದಹೊಂಡ

ಪ್ರಮುಖ ಮುಖ್ಯಾಂಶಗಳು

  • ವಾಯುಪಡೆಯ ಮುಖ್ಯಸ್ಥ ಎ.ಪಿ.ಸಿಂಗ್‌ ಅತಿಥಿಯಾಗಿ ಭಾಗಿ
  • ನೌಕಾಪಡೆಯ ಜೊತೆ ಜಂಟಿ ಕಾರ್ಯಾಚರಣೆಗೆ ಬದ್ಧ ಎಂದ ಸಿಂಗ್‌
ಕಾರವಾರ:ಭಾರತೀಯ ನೌಕಾಪಡೆಯ ಬಲವರ್ಧನೆಗೆ ಮತ್ತೊಂದು ಪ್ರಮುಖ ಹೆಜ್ಜೆಯನ್ನಿಡಲಾಗಿದ್ದು,
ಅತ್ಯಾಧುನಿಕ ಆಂಟಿ-ಸಬ್‌ಮರೀನ್ ವಾರ್‌ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ ಶ್ರೇಣಿಯ ಐಎನ್‌ಎಸ್ ಮಾಲ್ವನ್ ಯುದ್ಧನೌಕೆಯನ್ನು ಭಾರತೀಯ ನೌಕಾಪಡೆಗೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ಬುಧವಾರ ಅಧಿಕೃತವಾಗಿ ನಿಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಾಯುಪಡೆಯ ಮುಖ್ಯಸ್ಥರಾದ ಏರ್‌ಚೀಫ್ ಮಾರ್ಷಲ್ ಎ.ಪಿ. ಸಿಂಗ್, ಭವಿಷ್ಯದ ರಕ್ಷಣಾ
ಸವಾಲುಗಳನ್ನು ಎದುರಿಸಲು ನೌಕಾಪಡೆ, ವಾಯುಪಡೆ ಹಾಗೂ ಭೂಸೇನೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ತಂತ್ರಜ್ಞಾನವು ಕೇವಲ ಸಾಮರ್ಥ್ಯವನ್ನು ನೀಡುತ್ತದೆ. ಆದರೆ, ಯುದ್ಧಹಡಗನ್ನು ಅತ್ಯಂತ ಶಕ್ತಿಶಾಲಿ ಪಡೆಯನ್ನಾಗಿ ಪರಿವರ್ತಿಸುವುದು ನಾವಿಕರ ವೃತ್ತಿಪರತೆ, ನಾಯಕತ್ವ, ತಂಡದ ಶ್ರಮ. ಐ.ಎನ್.ಎಸ್. ಮಾಲ್ವನ್ ಶಾಂತಿಯ ಸಮಯದಲ್ಲಿ ಸದಾ ಜಾಗರೂಕವಾಗಿರಲಿ, ಬಿಕ್ಕಟ್ಟಿನ ಸಮಯದಲ್ಲಿ ದೃಢವಾಗಿರಲಿ ಮತ್ತು ಸಂಘರ್ಷ ಸಮಯದಲ್ಲಿ ವಿಜಯಶಾಲಿಯಾಗಲಿ ಎಂದರು.
ಭಾರತೀಯ ನೌಕಾಪಡೆಯು ಪ್ರಾರಂಭದಿಂದಲೂ ನೌಕಾ ಹಡಗು ನಿರ್ಮಾಣದಲ್ಲಿ ಆತ್ಮ ನಿರ್ಭರತೆಯ ದೇಶೀಯತೆಯನ್ನು
ಅಳವಡಿಸಿಕೊಂಡು ಮುಂಚೂಣಿಯಲ್ಲಿದೆ. ನೌಕಾಪಡೆಯ ಮಾದರಿಯಲ್ಲೇ ಭಾರತೀಯ ವಾಯುಪಡೆ ಹಾಗೂ ಇತರ ರಕ್ಷಣಾ ಪಡೆಗಳು ಸಹ ಸ್ವಾವಲಂಬನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ವಿಷÀಯದಲ್ಲಿ ವೇಗವಾಗಿ ಮುನ್ನಡೆಯಬೇಕಿದೆ. ತಂತ್ರಜ್ಞಾನ ಅಭಿವೃದ್ಧಿಯಲ್ಲಿ ವಿಳಂಬವಾದರೆ, ಅದರ ಪ್ರಸ್ತುತತೆಯೇ ಇಲ್ಲದಂತಾಗುತ್ತದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ಸಂಶೋಧನೆ ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ನಿಗದಿತ ವೇಗದಲ್ಲಿ ಪೂರ್ಣಗೊಳಿಸಬೇಕಿದೆ ಎಂದರು.
ಪ್ರಾಜೆಕ್ಟ್ ಸೀಬರ್ಡ್ ಅಡಿಯಲ್ಲಿ ರೂಪುಗೊಂಡಿರುವ ಕಾರವಾರ ನೌಕಾನೆಲೆಯು ಜಾಗತಿಕ ಮಟ್ಟದ ವಿಶ್ವದರ್ಜೆಯ ಅತ್ಯಾಧುನಿಕ
ಮೂಲಸೌಕರ್ಯ ಮತ್ತು ಕಾರ್ಯಾಚರಣಾ ಸೌಲಭ್ಯಗಳನ್ನು ಹೊಂದಿದ್ದು, ಭಾರತದ ಕರಾವಳಿ ಭದ್ರತಾ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಕಮಾಂಡರ್ ಪ್ರವೀಣ್ ಕುಮಾರ್ ತಿವಾರಿ ಅವರು ಐಎನ್‌ಎಸ್ ಮಾಲ್ವಣ್‌ನ ಮೊದಲ ಕಮಾಂಡಿಂಗ್ ಅಧಿಕಾರಿಯಾಗಿ ಅಧಿಕಾರ
ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ನೌಕಾಪಡೆಯ ಪಶ್ಚಿಮ ಕಮಾಂಡ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್, ಯುದ್ಧ ನೌಕೆಗಳ ಉತ್ಪಾದನೆ ವಿಭಾಗದ ವೈಸ್ ಅಡ್ಮಿರಲ್ ಸಂಜಯ್ ಸಾಧು, ಕರ್ನಾಟಕ ನೇವರ್ ಏರಿಯದ ಫ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜೋಶ್ ವಿಜೆ ಸೇರಿದಂತೆ ಹಲವು ಹಿರಿಯ ರಕ್ಷಣಾ ಮತ್ತು ನೌಕಾಪಡೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರವಾರದ ಪ್ರಾಜೆಕ್ಟ್ ಸೀಬರ್ಡ್ ನೌಕಾನಲೆಯಲ್ಲಿ ಅಧಿಕೃತವಾಗಿ ನಿಯೋಜನೆಗೊಂಡ ಮೊದಲ ನೌಕಾಪಡೆಯ ಯುದ್ಧನೌಕೆ ಎಂಬ ಹೆಗ್ಗಳಿಕೆಗೆ ಐಎನ್‌ಎಸ್ ಮಾಲ್ವನ್ ಪಾತ್ರವಾಗಿದ್ದು, ಭಾರತದ ಸ್ವದೇಶಿ ಹಡಗು ನಿರ್ಮಾಣ ಯೋಜನೆಯಡಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ಐಎನ್‌ಎಸ್ ಮಾಲ್ವಣ್ ಹಡಗನ್ನು, ಕರಾವಳಿ ಮತ್ತು ಆಳಸಮುದ್ರದ ಪ್ರದೇಶಗಳಲ್ಲಿ ಶತ್ರು ಜಲಾಂತರ್ಗಾಮಿಗಳನ್ನು (ಸಬ್‌ಮರೀನ್) ಪತ್ತೆಹಚ್ಚಲು, ಟ್ರ‍್ಯಾಕ್ ಮಾಡಲು ಮತ್ತು ಧ್ವಂಸಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಸುಮಾರು 80 ಮೀಟರ್ ಉದ್ದ ಹಾಗೂ 1,100 ಟನ್ ತೂಕದ ಈ ಯುದ್ಧನೌಕೆಯು ನೌಕಾಪಡೆಯ ಬಲವನ್ನು ಗಣನೀಯವಾಗಿ ಹೆಚ್ಚಿಸಲಿದೆ. ಅತ್ಯಾಧುನಿಕ ಆಂಟಿ-ಸಬ್‌ಮರೀನ್ ರಾಕೆಟ್‌ಗಳು, ಸುಧಾರಿತ ಸೋನಾರ್ ವ್ಯವಸ್ಥೆ ಮತ್ತು ಆಧುನಿಕ ರೇಡಾರ್ ತಂತ್ರಜ್ಞಾನವನ್ನು ಹೊಂದಿದೆ. ಜಲಾಂತರ್ಗಾಮಿ ನಿಗಾ ಮತ್ತು ಜಲದಾಳಿ ವಿರೋಧಿ
ಕಾರ್ಯಾಚರಣೆಗಳನ್ನು ಅತ್ಯಂತ ಸಮರ್ಥವಾಗಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಪಶ್ಚಿಮ ಕರಾವಳಿಯನ್ನು ರಕ್ಷಿಸಲು ಮತ್ತು ಸಾಗರ ವ್ಯಾಪಾರವನ್ನು ನಿಯಂತ್ರಿಸಲು
ನಿರ್ಮಿಸಿದ ಐತಿಹಾಸಿಕ ಸಿಂಧುದುರ್ಗ ಕೋಟೆಯಿರುವ ಮಹಾರಾಷ್ಟçದ ಕರಾವಳಿ ಪಟ್ಟಣ ಮಾಲ್ವಾನ್ ಹೆಸರನ್ನು ಈ ಯುದ್ಧನೌಕೆಗೆ ಇಡಲಾಗಿದೆ. ಈ ಚಾರಿತ್ರಿಕ ಪರಂಪರೆಯನ್ನು ಬಿಂಬಿಸಲು, ಹಡಗಿನ ಶಿಖರ ಲಾಂಛನದಲ್ಲಿ ಶಿವಾಜಿ ಮಹಾರಾಜರ ಪ್ರಸಿದ್ಧ ಆಯುಧವಾದ ‘ಬಾಘ್ ಹುಲಿ ಉಗುರನ್ನು ಬಳಸಲಾಗಿದೆ.