ನ್ಯೂಸ್

ಸಬ್ ರಿಜಿಸ್ಟ್ರಾರ್‌ಗೆ 3 ವರ್ಷ ಜೈಲು ಶಿಕ್ಷೆ; ಸೇವೆಯಿಂದ ವಜಾ

ಬೆಂಗಳೂರು: ಸೈಟ್ ಕ್ರಯಪತ್ರ ನೋಂದಣಿ ಮಾಡಿಕೊಡಲು ಲಂಚ ಪಡೆದ ಸಬ್ ರಿಜಿಸ್ಟ್ರಾರ್‌ಗೆ 3 ವರ್ಷಗಳ ಜೈಲುಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಿ ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ.

ಹಾಸನ ಜಿಲ್ಲೆ ಹೊಳೆನರಸೀಪುರ ಸಬ್ ರಿಜಿಸ್ಟ್ರಾರ್ ಭಾಸ್ಕರ್ ಸಿದ್ದರಾಮಪ್ಪ ಚೋವುರ್‌ಗೆ ಒಳಗಾದ ಅಪರಾಧಿ. ಸೈಟ್ ಕ್ರಯಪತ್ರ ನೋಂದಣಿ ಮಾಡಿಕೊಡಲು 15 ಸಾವಿರ ರೂ. ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

2019ರ ಏ. 4ರಂದು ನಂದಿನಿ ಲೇಔಟ್ ನಿವಾಸಿ ಎಚ್.ಎಂ. ಜಗದೀಶ್ ಎಂಬುವರು 40್ಡ30 ಚದರ ಅಡಿ ಸೈಟ್ ಖರೀದಿಸಿದ್ದರು. ನೋಂದಣಿಗಾಗಿ ಜಾಲ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋದಾಗ ಭಾಸ್ಕರ್ ಸಿದ್ದರಾಮಪ್ಪ ಚೋವುರ್ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದರು. ಚೌಕಾಸಿ ಮಾಡಿ 15 ಸಾವಿರಕ್ಕೆ ಒಪ್ಪಿದ್ದರು. ಈ ಬಗ್ಗೆ ಜಗದೀಶ್ ಕೊಟ್ಟ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದೂರುದಾರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದರು.

ಲಂಚಕ್ಕೆ ಸಂಬಂಧಿಸಿದ ಮಾತುಕತೆಯನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಜತೆಗೆ ಲಂಚದ ಮೊತ್ತ ನೀಡಿದ್ದರು. ಎಸಿಬಿ ಪೊಲೀಸರು ದಾಳಿ ನಡೆಸಿದಾಗ ಭಾಸ್ಕರ್ ಲಂಚದ ಹಣವನ್ನು ಕಿಟಕಿಯಿಂದಾಚೆಗೆ ಎಸೆದಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ನಂತರ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿತ್ತು. ಲಂಚದ ಹಣ ಮುಟ್ಟೇ ಇಲ್ಲ, ನನ್ನ ಟೇಬಲ್‌ನಲ್ಲಿ ಲಂಚದ ಹಣ ಸಿಕ್ಕಿಲ್ಲ ಎಂದು ಭಾಸ್ಕರ್ ನ್ಯಾಯಾಲಯದಲ್ಲಿ ವಾದಿಸಿದ್ದರು.

ಆದರೆ ತನಿಖಾಧಿಕಾರಿಗಳು ತಾಂತ್ರಿಕ ಸಾಕ್ಷ್ಯಗಳನ್ನು ಮುಂದಿಟ್ಟಿದ್ದರು. ವಾದ- ಪ್ರತಿವಾದವನ್ನು ಆಲಿಸಿದ್ದ ಸಿವಿಲ್ ನ್ಯಾಯಾಲಯವು ಭಾಸ್ಕರ್ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. 5 ಲಕ್ಷ ರೂ. ದಂಡ ತೆರದಿದ್ದರೆ 5 ತಿಂಗಳು ಹೆಚ್ಚುವರಿ ಜೈಲುಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.

ಸೇವೆಯಿಂದ ವಜಾ :

ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿ ಶಿಕ್ಷೆಗೆ ಒಳಗಾದ ಹೊಳೆನರಸೀಪುರ ಸಬ್ ರಿಜಿಸ್ಟ್ರಾರ್ ಭಾಸ್ಕರ್ ಎಸ್. ಚೌರ್ ಅವರನ್ನು ಸೇವೆಯಿಂದ ವಜಾಗೊಳಿಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಎ. ದಯಾನಂದ ಸೋಮವಾರ ಆದೇಶ ಹೊರಡಿಸಿದ್ದಾರೆ.