ರಾಷ್ಟ್ರೀಯ ಸಬ್ ಜೂ. ಈಜು: ಕರ್ನಾಟಕ ಸಮಗ್ರ ಚಾಂಪಿಯನ್
ಬೆಂಗಳೂರು: ಕರ್ನಾಟಕ ತಂಡ 10 ಚಿನ್ನ, 10 ಬೆಳ್ಳಿ, 19 ಕಂಚಿನ ಸಹಿತ ಒಟ್ಟು 39 ಪದಕಗಳನ್ನು ಜಯಿಸುವ ಮೂಲಕ ಜೈಪುರದಲ್ಲಿ ಭಾನುವಾರ ಮುಕ್ತಾಯಗೊಂಡ 42ನೇ ಸಬ್ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನಲ್ಲಿ (
Sub Junior National Aquatic Championship
) ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. ತಮಿಳುನಾಡು ತಂಡ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ಕರ್ನಾಟಕ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರತ್ಯೇಕವಾಗಿಯೂ ಚಾಂಪಿಯನ್ ಪಟ್ಟಕ್ಕೇರಿತು.
ಕೂಟದ ನಾಲ್ಕನೇ ಹಾಗೂ ಕೊನೇ ದಿನ ರಾಜ್ಯದ ಈಜುಪಟುಗಳು ಮತ್ತೆ 2 ಚಿನ್ನ, 3 ಬೆಳ್ಳಿ ಮತ್ತು 2 ಕಂಚಿನ ಸಹಿತ ಒಟ್ಟು 7 ಪದಕ ಒಲಿಸಿಕೊಂಡರು. ಬಾಲಕರ 50 ಮೀ. ಬ್ಯಾಕ್ಸ್ಟ್ರೊಕ್ ಗ್ರೂಪ್-2ರಲ್ಲಿ ರಾಜ್ಯ ಎಸ್. ಕ್ರಿಷ್ ಚಿನ್ನ ಗೆದ್ದರು. ಇದು ಅವರಿಗೆ ಕೂಟದ 4ನೇ ಸ್ವರ್ಣ ಪದಕವಾಗಿತ್ತು. ಬಾಲಕಿಯರ 100 ಮೀ. ಬ್ರೆಸ್ಟ್ಸ್ಟ್ರೊಕ್ ಗ್ರೂಪ್-3ರಲ್ಲಿ ರಿತನ್ಯಾ ಶಿವಕುಮಾರ್ ಚಿನ್ನ ಜಯಿಸಿದರು.
ಬಾಲಕಿಯರ 200 ಮೀ. ಬಟರ್ಫ್ಲೈ ಗ್ರೂಪ್-2ರಲ್ಲಿ ಮಾನ್ಯಾ ಆರ್. ವಧ್ವಾ, 100 ಮೀ. ಬ್ರೆಸ್ಟ್ಸ್ಟ್ರೊಕ್ ಗ್ರೂಪ್-2ರಲ್ಲಿ ಇಂಚರಾ ಎಚ್.ಆರ್. ಮತ್ತು ಬಾಲಕರ 100 ಮೀ. ಬ್ರೆಸ್ಟ್ಸ್ಟ್ರೊಕ್ ಗ್ರೂಪ್-3ರಲ್ಲಿ ಡೇನಿಯರ್ ಇಮ್ಯಾನ್ಯುಯೆಲ್ ಸಾಲ್ದಾನಾ ಬೆಳ್ಳಿ ಒಲಿಸಿಕೊಂಡರು. 100 ಮೀ. ಬ್ರೆಸ್ಟ್ಸ್ಟ್ರೊಕ್ ಗ್ರೂಪ್-2ರಲ್ಲಿ ಸಿರಿ ಪ್ರೀತಮ್ ಮತ್ತು 100 ಮೀ. ಫ್ರೀಸ್ಟೈಲ್ ಗ್ರೂಪ್-3ರಲ್ಲಿ ಗಾಯತ್ರಿ ಸೋಮಯಾಜಿ ಕಂಚು ಗೆದ್ದರು.