Sub Inspector : ಸಬ್ ಇನ್ಸ್‌ಪೆಕ್ಟರ್ ಸಮವಸ್ತ್ರವನ್ನು ಧರಿಸಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನನ್ನು ಬಂಧಿಸಲಾಗಿದೆ.
ಬಂಧಿತನನ್ನು ತಿರುವನಂತಪುರದ ನೆಡುಮಂಗಾಡ್ ಮೂಲದ ಅಖಿಲೇಶ್ (30) ಎಂದು ಗುರುತಿಸಲಾಗಿದ್ದು, ರೈಲ್ವೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಶನಿವಾರ ಬೆಳಗ್ಗೆ ಚೆನ್ನೈ-ಗುರುವಾಯೂರ್ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದೆ. ಕಾಯಂಕುಲಂ ನಿಲ್ದಾಣದಲ್ಲಿ ರೈಲನ್ನು ಪರಿಶೀಲಿಸುತ್ತಿದ್ದ ರೈಲ್ವೆ ಪೊಲೀಸರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅಖಿಲೇಶ್ನನ್ನು ವಿಚಾರಣೆ ನಡೆಸಿದಾಗ ಆಗ ಸಿಕ್ಕಿಬಿದ್ದಿದ್ದಾನೆ.
ಆರಂಭದಲ್ಲಿ ಎಸ್‌ಐ ಸಮವಸ್ತ್ರ, ಕ್ಯಾಪ್ ಮತ್ತು ಭುಜದ ಮೇಲಿನ ಸ್ಟಾರ್ ನೋಡಿದಾಗ ರೈಲ್ವೆ ಪೊಲೀಸ್ ಅಧಿಕಾರಿಗಳೇ ಅಖಿಲೇಶ್‌ಗೆ ಸೆಲ್ಯೂಟ್ ಹೊಡೆದರು. ಆದರೆ, ಪ್ರತಿಯಾಗಿ ಅಖಿಲೇಶ್ ಮಾಡಿದ ಸೆಲ್ಯೂಟ್‌ನಲ್ಲಿ ದೋಷವನ್ನು ಕಂಡು ಅನುಮಾನ ಬಂತು. ನಂತರ ಆತನನ್ನು ವಿಚಾರಿಸಿದಾಗ, ತ್ರಿಶೂರ್‌ನ ಇರಂಗಲಕುಡ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿರುವುದಾಗಿ ಮತ್ತು ಅಲ್ಲಿಗೆ ಹೋಗುತ್ತಿರುವುದಾಗಿ ಹೇಳಿದ್ದಾನೆ.
ಇದಾದ ತಕ್ಷಣ ರೈಲ್ವೆ ಪೊಲೀಸರು ಕರೆ ಮಾಡಿ ವಿಚಾರಿಸಿದಾಗ, ಅಂತಹ ವ್ಯಕ್ತಿ ಯಾರೂ ಇಲ್ಲ ಎಂದು ಇರಂಗಲಕುಡ ಪೊಲೀಸ್ ಠಾಣೆಯವರು ಮಾಹಿತಿ ನೀಡಿದ್ದಾರೆ. ಬಳಿಕ ಆಲಪ್ಪುಳ ರೈಲು ನಿಲ್ದಾಣವನ್ನು ತಲುಪಿದಾಗ, ತಾನು ಎಸ್‌ಐ ಅಲ್ಲ ಎಂದು ಅಖಿಲೇಶ್ ಒಪ್ಪಿಕೊಂಡನು. ನಾನು ಪಿಎಸ್‌ಸಿ ಪರೀಕ್ಷೆ ಬರೆಯಲು ತ್ರಿಶೂರ್‌ಗೆ ಹೋಗುತ್ತಿದ್ದೇನೆ. ಪೊಲೀಸ್ ಇಲಾಖೆಗೆ ಸೇರಬೇಕೆಂಬ ಆಸೆ ಇದೆ. ನಾನು ಮಾಜಿ ಸೈನಿಕನ ಮಗನೂ ಕೂಡ. ಹೀಗಾಗಿ ನಾನು ಸಮವಸ್ತ್ರ ಧರಿಸಿ ಬಂದೆ ಎಂದು ಹೇಳಿಕೊಂಡಿದ್ದಾನೆ.
ನಾನು ಎಸ್‌ಐ ಸಮವಸ್ತ್ರ ಧರಿಸಿ ಯಾವಾಗಲೂ ಮನೆಯೊಳಗೆ ಇರುತ್ತಿದ್ದೆ ಮತ್ತು ಹೊರಗೆ ಬಂದಿದ್ದು ಇದೇ ಮೊದಲು ಎಂದಿದ್ದಾನೆ. ಪೊಲೀಸರ ಅಧಿಕೃತ ಚಿಹ್ನೆ ಮತ್ತು ಸಮವಸ್ತ್ರವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಂಡು ನಂತರ ಸ್ಟೇಷನ್ ಜಾಮೀನಿನ ಮೇಲೆ ಅಖಿಲೇಶ್ನನ್ನು ಬಿಡುಗಡೆ ಮಾಡಲಾಯಿತು. (ಏಜೆನ್ಸೀಸ್)