ನ್ಯೂಸ್

ಮದುವೆ ಮುಂದೂಡಿ ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಶಾಹೀದಾ ಕ್ರಮಕ್ಕೆ ಭಾರಿ ಮೆಚ್ಚುಗೆ

ಹೃಷಿಕೇಶ್‌: ಕರೊನಾ ವೈರಸ್‌ನಿಂದ ಸಾರ್ವಜನಿಕರನ್ನು ಸುರಕ್ಷಿತವಾಗಿಡಲು ಹೋರಾಟ ನಡೆಸುತ್ತಿರುವವರು ಅದೆಷ್ಟೋ ಮಂದಿ. ಜನರಿಗಾಗಿ ತಮ್ಮ ಜೀವವನ್ನೂ ಲೆಕ್ಕಿಸದೆ ಹಲವಾರು ವೈದ್ಯರು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಹೋರಾಟ ಮಾಡುತ್ತಿರುವ ಕಾರಣಕ್ಕಾಗಿಯೇ ಜನರು ನೆಮ್ಮದಿಯಿಂದ ಇರುವಂಥಾಗಿದೆ.

ಜನರನ್ನು ಕ್ಷೇಮವಾಗಿ ಇರಿಸುವ ಇಂಥ ಸೇವಕರು ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿಯೋ, ಅದನ್ನು ಮುಂದಕ್ಕೆ ಹಾಕಿಯೋ ತ್ಯಾಗ ಮಾಡುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಶಾಹೀದಾ ಪರ್ವೀನ್‌. ಉತ್ತರಾಖಂಡದ ಹೃಷಿಕೇಶ್‌ನ ಮುನಿ ಕೀ ರೇತಿ ಪೊಲೀಸ್‌ ಠಾಣೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಾಹೀದಾ ಅವರ ವಿವಾಹ ಇದೇ ಏಪ್ರಿಲ್‌ 5ರಂದು ನಿಗದಿಯಾಗಿತ್ತು. ಮದುವೆಗೆ ಎಲ್ಲ ಸಿದ್ಧತೆಯೂ ನಡೆದಿತ್ತು. ಲಾಕ್‌ಡೌ ಇದ್ದ ಹಿನ್ನೆಲೆಯಲ್ಲಿ ಸಿಂಪಲ್‌ ಮದುವೆಗೂ ನಿರ್ಧರಿಸಲಾಗಿತ್ತು.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನಿನ್ನೆ ಮದುವೆ ನಡೆಯಬೇಕಿತ್ತು. ಆದರೆ ಶಾಹೀದಾ ಹಾಗೆ ಮಾಡಲಿಲ್ಲ. ಅವರಿಗೆ ತಮ್ಮ ಮದುವೆಗಿಂತ ಹೆಚ್ಚಾಗಿ ಕಂಡದ್ದು ಕರೊನಾ ಮಹಾಮಾರಿಯಿಂದಾಗಿ ನಿರಾಶ್ರಿತರಾಗಿದ್ದ ವಲಸಿಗರು. ಮದುವೆ ಮುಂದೊಂದು ದಿನ ಆಗಬಹುದು, ಆದರೆ ತುರ್ತಾಗಿ ಆಗಬೇಕಾದದ್ದು ಈ ನಿರಾಶ್ರಿತರಿಗೊಂದು ದಾರಿ ಎಂದುಕೊಂಡ ಶಾಹೀದಾ, ಮದುವೆ ಮುಂದೂಡಿಕೆ ಕುರಿತಂತೆ ತಮ್ಮ ಭಾವಿ ಪತಿಯಲ್ಲಿ ಚರ್ಚಿಸಿದರು.

ಅದಕ್ಕೆ ಅವರೂ ಅನುಮತಿ ನೀಡಿದ ಹಿನ್ನೆಲೆಯಲ್ಲಿ, ಶಾಹಿದಾ ಈಗ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ವಲಸಿಗರು ನೆಲೆಸಿರುವ ಕ್ಯಾಂಪ್‌ಗೆ ತೆರಳಿರುವ ಅವರು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಮದುವೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಆದರೆ ಈ ನಡುವೆಯೇ ಕರೊನಾ ವೈರಸ್‌ನಿಂದಾಗಿ ಅದೆಷ್ಟೋ ಜನರು ನಿರಾಶ್ರಿತರಾಗಿರುವ ವಿಚಾರ ತಿಳಿಯಿತು. ಆದ್ದರಿಂದ ಇದು ತುರ್ತಾಗಿ ಆಗಬೇಕಾಗಿರುವ ಕಾರ್ಯ ಎಂದು ಅರಿತ ನಾನು ಮದುವೆಗಿಂತ ಸೇವೆಯೇ ಮುಖ್ಯ ಎಂದುಕೊಂಡು ಅದನ್ನು ಆರಿಸಿಕೊಂಡೆ. ನನ್ನ ಮನೆಯವರು ಹಾಗೂ ಭಾವಿ ಪತಿಯ ಮನೆಯವರು ಇದಕ್ಕೆ ಒಪ್ಪಿಗೆ ಸೂಚಿಸಿದರು. ಇದು ನನ್ನಲ್ಲಿ ಇನ್ನಷ್ಟು ಉತ್ಸಾಸ ತುಂಬಿದೆ. ಲಾಕ್‌ಡೌನ್‌ ಅವಧಿ ಮುಗಿದ ಮೇಲೆ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ. ಅಲ್ಲಿಯವರೆಗೆ ನನ್ನ ಸೇವೆಯಲ್ಲಿ ನಾನು ಮುಂದುವರಿಯುತ್ತೇನೆ’ ಎಂದಿದ್ದಾರೆ ಶಾಹೀದಾ.

ಇವರ ಇಂಥ ಅಪರೂಪದ ಕಾರ್ಯಕ್ಕೆ ಇಡೀ ಪೊಲೀಸ್‌ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದೆ.