ಬೆಂಗಳೂರು: ಲೋಕಾ ಪೊಲೀಸರ ಎಡವಟ್ಟಿನಿಂದಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಬ್ ಇನ್ಸ್ಪೆಕ್ಟರ್ಗೆ ಪ್ರಕರಣದಿಂದ ಮುಕ್ತಿ ಸಿಕ್ಕಿದೆ. 2012ರಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನು ಬಿಡುಗಡೆಗೊಳಿಸಲು ಆಡುಗೋಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಮಾದಯ್ಯ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಲೋಕಾಯುಕ್ತ ಪೊಲೀಸರು ಠಾಣೆ ಮೇಲೆ ದಾಳಿ ನಡೆಸಿ ಶಿವಮಾದಯ್ಯ ಮತ್ತು ಖಾಸಗಿ ವ್ಯಕ್ತಿ ತಾಜ್ವುದ್ದೀನ್ನನ್ನು ಬಂಧಿಸಿದರೂಚಾರ್ಜ್ಶೀಟ್ನಲ್ಲಿ ತಪು್ಪ ಹೆಸರು ನಮೂದಿಸಿ, ಸೂಕ್ತ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ಪ್ರಕರಣ ಖುಲಾಸೆಗೊಂಡಿದೆ.
ಪ್ರಕರಣದ ವಿವರ: 2012ರಲ್ಲಿ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಳ್ಳರನ್ನು ಬಂಧಿಸಿದ್ದರು. ಕದ್ದ ಚಿನ್ನಾಭರಣವನ್ನು ತಾವು ಪರಿಚಿತ ವ್ಯಕ್ತಿಯೊಬ್ಬನಿಗೆ ನೀಡಿದ್ದು, ಆತ ಪಾನ್ಬ್ರೋಕರ್ಗೆ ಮಾರಾಟ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ಕಳ್ಳರು ಬಾಯ್ಬಿಟ್ಟಿದ್ದರು. ಈ ಮಾಹಿತಿ ಆಧರಿಸಿ 2012ರ ಜೂ.13ರಂದು ಆಡುಗೋಡಿ ಪೊಲೀಸರು ಪಾನ್ ಬ್ರೋಕರ್ಗೆ ಚಿನ್ನ ಮಾರಾಟ ಮಾಡಿದ್ದ ವ್ಯಕ್ತಿಯ ಸ್ನೇಹಿತ ಶೇಖ್ ಸಿಖಂದರ್ ಎಂಬಾತನನ್ನು ಸೆರೆ ಹಿಡಿದು ಠಾಣೆಗೆ ಕರೆ ತಂದಿದ್ದರು. ನಂತರ ಶೇಖ್ನ ಅಣ್ಣ ಶೇಖ್ ಅಬ್ದುಲ್ಲಾನನ್ನು ಠಾಣೆಗೆ ಕರೆಸಿದ್ದ ಎಸ್ಐ ಶಿವಮಾದಯ್ಯ, ನಿಮ್ಮ ತಮ್ಮನನ್ನು ಬಿಡಬೇಕಾದರೆ 10 ಸಾವಿರ ರೂ. ಹಾಗೂ ಇನ್ಸ್ಪೆಕ್ಟರ್ಗೆ 10 ಸಾವಿರ ರೂ. ನೀಡಬೇಕು ಎಂದು ಲಂಚಕ್ಕೆ ಬೇಡಿಕೆಯಿಟ್ಟಿದ್ದ.
ಲಂಚ ನೀಡಲು ಇಚ್ಚಿಸದ ಶೇಖ್ ಅಬ್ದುಲ್ಲಾ ಮರುದಿನ ಲೋಕಾಯುಕ್ತ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ದೂರು ನೀಡುವ ವೇಳೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಎಸ್ಐ ಶಿವಮಾದಯ್ಯನ ಹೆಸರನ್ನು ಶಿವಯ್ಯ ಎಂದು ನಮೂದಿಸ ಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾ ಪೊಲೀಸರು ಅದೇ ದಿನ ಆಡುಗೋಡಿ ಠಾಣೆಗೆ ದಾಳಿ ನಡೆಸಲು ಮುಂದಾಗಿ ದ್ದರು. ಅದರಂತೆ, 15 ಸಾವಿರ ರೂ. ಮೌಲ್ಯದ ನೋಟುಗಳಿಗೆ ಪಿನಾಪ್ಟಿಲಿನ್ ಪೌಡರ್ ಹಾಕಿ ಎಸ್ಐಗೆ ಲಂಚ ನೀಡುವ ವೇಳೆ ತಮಗೆ ಸೂಚನೆ ನೀಡುವಂತೆ ಅಬ್ದುಲ್ಲಾಗೆ ಸೂಚಿಸಿದ್ದರು. ಅಬ್ದುಲ್ಲಾ ಲಂಚ ಕೊಡುವ ವೇಳೆ ಲೋಕಾ ಪೊಲೀಸರು ದಾಳಿ ನಡೆಸಿ ಶಿವಮಾದಯ್ಯನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಹಣ ಸಿಕ್ಕಿರಲಿಲ್ಲ. ಆಗ ಖಾಸಗಿ ವ್ಯಕ್ತಿ ತಾಜ್ವುದ್ದೀನ್ ಎಂಬಾತನ ಕೈಗೆ ಲಂಚ ನೀಡುವಂತೆ ಶಿವಮಾದಯ್ಯ ಸೂಚಿಸಿದ ಹಿನ್ನೆಲೆಯಲ್ಲಿ ಆತನಿಗೆ ಕೊಟ್ಟಿದ್ದೆ ಎಂದು ಲೋಕಾ ಪೊಲೀಸರ ಬಳಿ ಅಬ್ದುಲ್ಲಾ ಹೇಳಿದ್ದರು. ತಾಜ್ವುದ್ದೀನ್ನ್ನು ಪರಿಶೀಲಿಸಿದಾಗ 15 ಸಾವಿರ ರೂ. ಪತ್ತೆಯಾಗಿತ್ತು.
ಪೊಲೀಸರು ಎಡವಿದ್ದೆಲ್ಲಿ?
ಶೇಖ್ ಸಿಖಂದರ್ನನ್ನು ಠಾಣೆಗೆ ಪೊಲೀಸರು ಕರೆತಂದ ಬಗ್ಗೆ ತನಿಖೆ ವೇಳೆ ಯಾವುದೇ ದಾಖಲೆ ಕಲೆ ಹಾಕಿರಲಿಲ್ಲ. ಚಾರ್ಜ್ಶೀಟ್ನಲ್ಲಿ ಸಬ್ಇನ್ಸ್ಪೆಕ್ಟರ್ ಶಿವಮಾದಯ್ಯ ಹೆಸರನ್ನು ಶಿವಯ್ಯ ಎಂದು ತಪ್ಪಾಗಿ ನಮೂದಿಸಿದ್ದರು. ಅಂದಿನ ಬೆಂಗಳೂರು ಪೊಲೀಸ್ ಆಯುಕ್ತರು ಶಿವಮಾದಯ್ಯನಿಗೆ ಎಎಸ್ಐನಿಂದ ಎಸ್ಐಗೆ ಬಡ್ತಿ ನೀಡಿದ್ದರು. ಕಾನೂನು ಪ್ರಕಾರ ಯಾವ ಅಧಿಕಾರಿ ಈತನನ್ನು ನೇಮಿಸುತ್ತಾರೋ, ಅವರಿಗಿಂತ ಕೆಳ ಹಂತದಲ್ಲಿರುವ ಅಧಿಕಾರಿ ಸಕ್ಷಮ ಪ್ರಾಧಿಕಾರದಿಂದ ತನಿಖೆಗೆ ಅನುಮತಿ ನೀಡುವಂತಿಲ್ಲ. ಆದರೆ, ಈ ಪ್ರಕರಣದಲ್ಲಿ ಐಜಿಪಿ ತನಿಖೆ ನಡೆಸಲು ಅನುಮತಿ ನೀಡಿದ್ದರು. ಇದು ಪೊಲೀಸರಿಗೆ ಹಿನ್ನೆಡೆಯಾಗಿದೆ.
ಪರಿಶೀಲನೆ ನಡೆಸದ ಲೋಕಾ ಪೊಲೀಸರು
ಆಡುಗೋಡಿ ಪೊಲೀಸ್ ಠಾಣೆಯಲ್ಲೇ ಶೇಖ್ ಸಿಖಂದರ್ ಎಂಬ ವ್ಯಕ್ತಿ ಇದ್ದಾನೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸದ ಲೋಕಾ ಪೊಲೀಸರು, ಶಿವಮಾದಯ್ಯ ಮತ್ತು ತಾಜ್ವುದ್ದೀನ್ನನ್ನು ಬಂಧಿಸಿದ್ದರು. ಇನ್ಸ್ಪೆಕ್ಟರ್ ಮಂಜುನಾಥ್ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಿದ್ದರು. ಈ ನಡುವೆ ಪ್ರಕರಣದ ತನಿಖೆ ನಡೆಸಲು ಲೋಕಾ ಪೊಲೀಸರು ಸಕ್ಷಮ ಪ್ರಾಧಿಕಾರದ ಅನುಮತಿ ಕೇಳಿದ್ದರು. ಆ ವೇಳೆ ಐಜಿಪಿಯಾಗಿದ್ದ ಪ್ರಶಾಂತ್ಕುಮಾರ್ ಠಾಕೂರ್ ತನಿಖೆ ನಡೆಸಲು ಅನುಮತಿ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಲೋಕಾ ಪೊಲೀಸರು ಶಿವಮಾದಯ್ಯ ಮತ್ತು ತಾಜ್ವುದ್ದೀನ್ ವಿರುದ್ಧ ಲೋಕಾಯುಕ್ತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಮೇಲಧಿಕಾರಿ ನೇಮಕಾತಿ ಮಾಡಿದ ಸರ್ಕಾರಿ ಸಿಬ್ಬಂದಿ ವಿರುದ್ಧ ತನಿಖೆ ನಡೆಸುವಂತೆ ಅನುಮತಿ ನೀಡಲು ಇವರ ಕೆಳಹಂತದಲ್ಲಿರುವ ಅಧಿಕಾರಿಗಳಿಗೆ ಅಧಿಕಾರವಿರುವುದಿಲ್ಲ. | ಸುಂದರ್ ಹಿರಿಯ ವಕೀಲ
| ಅವಿನಾಶ ಮೂಡಂಬಿಕಾನ