ಶನೀಲ್ ಗೌತಮ್​ 
ನ್ಯೂಸ್

Shaneel Gowtham - ಸು ಫ್ರಮ್​ ಸೋ ರವಿ ಅಣ್ಣ 69- 56= 13!

Shaneel Gowtham - 
ನಟಿಸಿರುವುದು ಕೆಲವೇ ಚಿತ್ರಗಳಾದರೂ ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದವರು ಶನೀಲ್​ ಗೌತಮ್​. "ಸು ್ರಮ್​ ಸೋ' ಚಿತ್ರದ ಸೂಪರ್​ ಸಕ್ಸಸ್​ ಬಳಿಕ ಅವರು "ರವಿ ಅಣ್ಣ'ನಾಗಿಯೇ ಜನರಿಗೆ ಚಿರಪರಿಚಿತರು. ಕಲಾವಿದರಿಗೆ ಸಾಮಾನ್ಯವಾಗಿ ಒಂದು ಯಶಸ್ಸು ಸಿಕ್ಕ ತಕ್ಷಣ ಅವಕಾಶಗಳು ಹೆಚ್ಚಿ, ಬ್ಯಾಕ್​ ಟು ಬ್ಯಾಕ್​ ಚಿತ್ರಗಳಲ್ಲಿ ನಟಿಸುವುದು ಸಾಮಾನ್ಯ. ಆದರೆ, ಶನೀಲ್​ ಈ ವಿಷಯದಲ್ಲಿ ತುಂಬ ಎಚ್ಚರ ವಹಿಸಿದ್ದಾರೆ. 2025ರ ಜು. 25ಕ್ಕೆ "ಸು ಫ್ರಮ್​ ಸೋ' ಬಿಡುಗಡೆಯಾಗಿ ಒಂದು ವರ್ಷವಾಗಲಿದ್ದು, ಈ ಅವಧಿಯಲ್ಲಿ ಬರೋಬ್ಬರಿ 69 ಕಥೆಗಳನ್ನು ಕೇಳಿದ್ದು, 13 ಕಥೆಗಳನ್ನು ಓಕೆ ಮಾಡಿದ್ದಾರಂತೆ. ಸದ್ಯ "ಶ್ರೀರಾಮಚಂದ್ರ' ಎಂಬ ಚಿತ್ರದಲ್ಲಿ ಬಿಜಿಯಿರುವ ಅವರು, "ಒಳ್ಳೆ ಸಿನಿಮಾನೇ ಮಾಡಬೇಕು ಎಂಬುದು ನನ್ನ ಉದ್ದೇಶ. ಹೀಗಾಗಿಯೇ "ಸು ಫ್ರಮ್ ಸೋ ಬಳಿಕ ಮತ್ತೆ ಜನ "ರವಿ ಅಣ್ಣ'ನಂತೆಯೇ ನೆನಪಿನಲ್ಲಿಟ್ಟುಕೊಳ್ಳುವಂತಹ ಪಾತ್ರದಲ್ಲಿ ನಟಿಸಬೇಕು ಅಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೇನೆ. ಸಿನಿಮಾ ಆಗಲು ಎಲ್ಲವೂ ಕೂಡಿ ಬರಬೇಕು, ದೇವರ ದಯೆಯೂ ಇರಬೇಕು. "ಶ್ರೀರಾಮಚಂದ್ರ'ದಲ್ಲಿ ನಟನೆಯ ಜತೆಗೆ ಕಥೆಯಲ್ಲೂ ಆರು ತಿಂಗಳು ಕೆಲಸ ಮಾಡಿದ್ದೇನೆ. ಈಗಾಗಲೇ ಶೇಕಡಾ 25ರಷ್ಟು ಶೂಟಿಂಗ್​ ಆಗಿದೆ. ಇನ್ನು ಮೂರು ತಿಂಗಳಲ್ಲಿ ಚಿತ್ರೀಕರಣ ಮುಗಿಯಲಿದೆ. 2027ರಲ್ಲಿ ಸಿನಿಮಾ ರಿಲೀಸ್​ ಆಗಲಿದ್ದು, "ಸು ್ರಮ್​ ಸೋ'ದಂತೆಯೇ ಇಡೀ ಕುಟುಂಬ ಕುಳಿತು ನೋಡುವಂತಹ ಚಿತ್ರವಿದು. ಎಮೋಷನಲ್​ ಮತ್ತು ಕಾಮಿಡಿ ಅಂಶಗಳಿರಲಿದ್ದು, ಥಿಯೇಟರ್​ನಿಂದ ಹೊರಬಂದಾಗಲೂ ಕಾಡುವ ಚಿತ್ರವಾಗಲಿದೆ' ಎಂದು ಭರವಸೆ ವ್ಯಕ್ತಪಡಿಸುತ್ತಾರೆ.

ನಾನು ಹೋಗುವುದಿಲ್ಲ, ಅವರನ್ನೇ ಕರೆಸಿಕೊಳ್ಳುತ್ತೇನೆ!

ಕನ್ನಡದ ಜತೆಗೆ ತಮಿಳು, ಮಲಯಾಳಂನಿಂದಲೂ ಶನೀಲ್​ಗೆ ಅವಕಾಶಗಳು ಬಂದಿದ್ದವಂತೆ. ಆದರೆ, "ನನಗೆ ಆ ಭಾಷೆಗಳ ಮೇಲೆ ಹಿಡಿತವಿಲ್ಲ. ಹೀಗಿದ್ದಾಗ ಭಾವನೆಗಳನ್ನು ವ್ಯಕ್ತಪಡಿಸುವುದು ಕಷ್ಟವಾಗುತ್ತದೆ. ಹಾಗಂತ ಪರಭಾಷೆಗಳಿಗೆ ಹೋಗುವದೇ ಇಲ್ಲ ಅಂತಲ್ಲ. ಆದರೆ, ಸದ್ಯಕ್ಕೆ ನಾನು ರೆಡಿಯಿಲ್ಲ. ಹೀಗಾಗಿಯೇ ತಮಿಳು, ಮಲಯಾಳಂ ಕಥೆಗಳನ್ನೂ ಕನ್ನಡದಲ್ಲೇ ಮಾಡುವಂತೆ ತಂಡಗಳನ್ನು ಒಪ್ಪಿಸಿದ್ದೇನೆ. ವಿಭಿನ್ನ ಪರಿಕಲ್ಪನೆಯ ಕಥೆಗಳಾದ ಕಾರಣ, ವರ್ಕ್​ ಆಗುವ ನಂಬಿಕೆಯಿದೆ' ಎನ್ನುತ್ತಾರೆ. 

ಎರಡು ರೀತಿಯ ಕಥೆಗಳು

"ಕಾಂತಾರ' ಸರಣಿಯ ಕಥೆಗಾರನಾಗಿಯೂ ಗುರುತಿಸಿಕೊಂಡಿರುವ ಶನೀಲ್​ ಪ್ರಕಾರ ಎರಡು ರೀತಿಯ ಕಥೆಗಳಿವೆಯಂತೆ. "ಒಂದು ನಮಗೆ ಬೇಕಾದ ಕಥೆ ಹೇಳುವುದು, ಮತ್ತೊಂದು ಜನರಿಗೆ ಬೇಕಾದ ಕಥೆ ಹೇಳುವುದು. ಎರಡನ್ನೂ ಮಿಶ್ರಣ ಮಾಡುವುದು ದೊಡ್ಡ ಸವಾಲು. ಈ ವಿಷಯದಲ್ಲಿ ನಮ್ಮ ತಂಡಕ್ಕೆ ಸ್ವಲ್ಪ ಹಿಡಿತವಿದೆ. ಸಿನಿಮಾ ನೋಡುವಾಗ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಅಂತ ಗಮನಿಸಿದರೆ, ಅವರಿಗೆ ಏನು ಬೇಕು ಎಂಬುದರ ಐಡಿಯಾ ಬರುತ್ತದೆ' ಎಂದು ಹೇಳಿಕೊಳ್ಳುತ್ತಾರೆ.