ನ್ಯೂಸ್

ಸಚಿವ, ಶಾಸಕರಿಂದ ಗಂಗಾ ಆರತಿ ಅಧ್ಯಯನ

ಬೆಂಗಳೂರು: ಗಂಗಾ ನದಿಗೆ ಮಾಡಲಾಗುವ ಗಂಗಾ ಆರತಿ ಮಾದರಿ ಕಾವೇರಿ ನದಿಗೆ ಕಾವೇರಿ ಆರತಿ ಮಾಡುವ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಅವಲೋಕಿಸಿ ಅಧ್ಯಯನ ನಡೆಸಲು ಸಚಿವರು, ಶಾಸಕರು ಮತ್ತು ಅಧಿಕಾರಿಗಳನ್ನೊಳಗೊಂಡ ನಿಯೋಗ ವಾರಣಾಸಿ ಮತ್ತು ಹರಿದ್ವಾರಕ್ಕೆ ಭೇಟಿ ನೀಡಲಿದೆ.

ಕೃಷಿ ಸಚಿವರು ಹಾಗೂ ಕಾವೇರಿ ಆರತಿ ಕಾರ್ಯಕ್ರಮದ ಅಧ್ಯಕ್ಷರಾದ ಚಲುವರಾಯಸ್ವಾಮಿ ಅಧ್ಯಕ್ಷತೆಯ ನಿಯೋಗ ಸೆ.20 ಹಾಗೂ 21ರಂದು ಅಧ್ಯಯನ ಪ್ರವಾಸ ಕೈಗೊಳ್ಳಲಿದೆ.

ಶುಕ್ರವಾರ ರಾತ್ರಿ ಹರಿದ್ವಾರದಲ್ಲಿ ಗಂಗಾ ನದಿಗೆ ಆರತಿ ಮಾಡುವುದನ್ನು ವೀಕ್ಷಣೆ ಮಾಡಲಿದೆ. ಸೆ.21ರ ಶನಿವಾರದಂದು ವಾರಣಾಸಿಯಲ್ಲಿ ಗಂಗಾ ಆರತಿಯನ್ನು ವೀಕ್ಷಣೆ ಮಾಡಲಿದೆ. ಸೆ. 22ರ ಭಾನುವಾರ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವುದರ ಜತೆಗೆ ಘಾಟ್‌ನಲ್ಲಿ ಸಂಚರಿಸಿ, ಅಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯಕ್ಕೆ ವಾಪಸಾಗಲಿದೆ.

ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಲಿ ಎಂಬ ಆಶಯಕ್ಕಾಗಿ ರಾಜ್ಯದ ಇತಿಹಾಸದಲ್ಲೇ ಪ್ರಥಮಬಾರಿಗೆ ಕಾವೇರಿ ನದಿಗೆ ಗಂಗಾ ಆರತಿ ಮಾದರಿ ಕಾವೇರಿ ಆರತಿ ಮಾಡುವ ಕಾರ್ಯಕ್ರಮ ಆಯೋಜಿಸುವುದಾಗಿ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದರು. ಇದರ ಭಾಗವಾಗಿ ಪ್ರಯತ್ನ ಆರಂಭವಾಗಿದೆ.

ಹರಿದ್ವಾರ ಮತ್ತು ಮತ್ತು ವಾರಣಾಸಿಯಲ್ಲಿ ಗಂಗಾ ನದಿಗೆ ಆರತಿ ಮಾಡುವುದನ್ನು ವೀಕ್ಷಿಸಿ ಸಮಗ್ರವಾಗಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲು ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಇದೀಗ ಅಧ್ಯಯನ ನಡೆಸಲಾಗುತ್ತಿದೆ ಎಂದು ಕಾವೇರಿ ಆರತಿ ಸಮಿತಿ ಸಂಚಾಲಕ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್, ಕೆ.ಎಂ.ಉದಯ್, ದಿನೇಶ್ ಗೂಳಿಗೌಡ, ಮಾಗಡಿ ಬಾಲ ಕೃಷ್ಣ , ಮೈಸೂರು ಹರೀಶ್ ಗೌಡ, ನಂಜನಗೂಡು ದರ್ಶನ್ ಧೃವನಾರಾಯಣ್, ಅರಸೀಕೆರೆ ಶಿವಲಿಂಗೇಗೌಡ, ಕೊಳ್ಳೇಗಾಲ ಕೃಷ್ಣಮೂರ್ತಿ, ವಿಧಾನಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ, ಮಂಡ್ಯ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಮಾಜಿ ಶಾಸಕರಾದ ರಾಜು ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಜಲಸಂಪನ್ಮೂಲ ಸಚಿವರ ಸಲಹೆಗಾರ ಜಯಪ್ರಕಾಶ್ ಸೇರಿ ಹಲವರು ನಿಯೋಗದಲ್ಲಿದ್ದಾರೆ.