ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಮಧ್ಯಾಹ್ನದ ಬಿಸಿಯೂಟ ಮತ್ತು ಬೇಸಿಗೆ ಸಂಭ್ರಮಕ್ಕೆ ಆಗಮಿಸಿದ್ದ ಮಕ್ಕಳನ್ನು ಹೂ ನೀಡುವ ಮೂಲಕ ಸ್ವಾಗತಿಸಿದ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಂ.ಸಿ.ಪ್ರಶಾಂತ್. 
ನ್ಯೂಸ್

ಬಿಸಿಯೂಟದ ಜತೆಗೆ ಕಲಿಕೆಗೆ ಮುಂದಾದ ವಿದ್ಯಾರ್ಥಿಗಳು

ರಾವಂದೂರು: ಪಿರಿಯಾಪಟ್ಟಣ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ತಾಲೂಕಿನಲ್ಲಿ 9,421 ವಿದ್ಯಾರ್ಥಿಗಳ ಪಾಲಕರಿಂದ ಒಪ್ಪಿಗೆ ಪಡೆದು 240 ಶಾಲಾ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು 41ದಿನಗಳವರೆಗೆ ಮುಂದುವರಿಸಲಾಗುತ್ತದೆ.

ಪ್ರತಿಯೊಂದು ದಿನವೂ ಸರ್ಕಾರವು ನಿಗದಿಪಡಿಸಿದ ರೀತಿಯಲ್ಲಿ ಒಂದೊಂದು ಬಗೆಯ ಪೌಷ್ಟಿಕ ಆಹಾರ ಒದಗಿಸಲು ವೇಳಾಪಟ್ಟಿ ನೀಡಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಬಿಸಿಲಿನಿಂದ ತತ್ತರಿಸಿದ ಮಕ್ಕಳಿಗೆ ಈ ಮಧ್ಯಾಹ್ನದ ಬಿಸಿಯೂಟ ಸಹಕಾರಿಯಾಗಲಿದೆ.

ರಾವಂದೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬೇಸಿಗೆ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಡ್ರಾಯಿಂಗ್, ಕ್ರಾಫ್ಟ್, ನೃತ್ಯ, ಕಂಪ್ಯೂಟರ್ ತರಬೇತಿ ಹಾಗೂ ಮಕ್ಕಳ ಕಲಿಕೆಗೆ ಅನುಕೂಲವಾಗುವಂತಹ ಸ್ಮಾರ್ಟ್‌ಕ್ಲಾಸ್ ಹೀಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಮೂಲಕ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ನಲಿಯುತ್ತಾ ಕಲಿಯುವ ಅವಕಾಶ ಒದಗಿಸಲಾಗಿದೆ.

ಮಧ್ಯಾಹ್ನದ ಬಿಸಿಯೂಟ ಹಾಗೂ ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ಮಕ್ಕಳಿಗೆ ಹೂ ನೀಡುವ ಮೂಲಕ ಸ್ವಾಗತಿಸಿದ ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಎಂ.ಸಿ.ಪ್ರಶಾಂತ್ ಮಾತನಾಡಿ, ಮಕ್ಕಳ ಹಸಿವನ್ನು ನೀಗಿಸುವುದು ಪುಣ್ಯದ ಕೆಲಸ. ಬೇಸಿಗೆ ರಜೆಯಲ್ಲಿಯೂ ಊಟ ನೀಡುವ ಪುಣ್ಯದ ಕೆಲಸ ಶಿಕ್ಷಕರಿಗೆ ದೊರಕಿದ್ದು, ಎಲ್ಲ ಶಿಕ್ಷಕರು ಮಕ್ಕಳಿಗೆ ವಿನೂತನ ಸೃಜನಶೀಲ ಚಟುವಟಿಕೆ ಆಯೋಜಿಸುವ ಮೂಲಕ ಮಕ್ಕಳನ್ನು ಪ್ರೇರೇಪಿಸಬೇಕು ಎಂದು ತಿಳಿಸಿದರು.
ಮುಖ್ಯಶಿಕ್ಷಕಿ ಲಿಲ್ಲಿಮೇರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಿ, ಶಿಕ್ಷಕರಾದ ಸತೀಶ್, ಶೀಲಾಮಣಿ, ರೂಪಾ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಹಾಜರಿದ್ದರು.