ನ್ಯೂಸ್

ಅಮೆರಿಕ ವೀಸಾ ಇಬ್ಬಗೆಯ ನೀತಿ: ಆಕ್ಷೇಪ ವ್ಯಕ್ತಪಡಿಸಿದ ಸಚಿವ ಜೈಶಂಕರ್​

ನವದೆಹಲಿ: ಅಮೆರಿಕದ ವೀಸಾಕ್ಕೆ ಅರ್ಜಿ ಹಾಕಿದ ಭಾರತೀಯರು ಸಂದರ್ಶನಕ್ಕೆ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಕಾಯಬೇಕಾಗುತ್ತದೆ. ಆದರೆ ಚೀನಾದಂಥ ದೇಶಗಳ ಪ್ರಜೆಗಳಿಗೆ ಎರಡೇ ದಿನದಲ್ಲಿ ಇದು ಸಿಗುತ್ತಿದೆ. ಇದು ಭಾರತದ ಅತೃಪ್ತಿಗೆ ಕಾರಣವಾಗಿದೆ.

ದೆಹಲಿಯಿಂದ ಅರ್ಜಿ ಸಲ್ಲಿಸಿದವರು ಗರಿಷ್ಠ 833 ದಿನ ಹಾಗೂ ಮುಂಬೈ ಅರ್ಜಿದಾರರು 848 ದಿನ ಕಾಯಬೇಕು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವೆಬ್​ಸೈಟ್​ ಹೇಳಿದೆ. ಬೀಜಿಂಗ್​ಗೆ ಕೇವಲ ಎರಡು ದಿನ ಹಾಗೂ ಇಸ್ಲಾಮಾಬಾದ್​ಗೆ (ಪಾಕಿಸ್ತಾನ) 450 ದಿನ ಕಾಯುವಿಕೆ ಸಮಯ (ವೇಯ್ಟ್​ ಟೈಮ್​) ನಿಗದಿಪಡಿಸಲಾಗಿದೆ. ವಿದ್ಯಾರ್ಥಿ ವೀಸಾಕ್ಕೆ ದೆಹಲಿ ಮತ್ತು ಮುಂಬೈಗೆ 430 ದಿನ ವೇಯ್ಟ್​ ಟೈಮ್​, ಇಸ್ಲಾಮಾಬಾದ್​ ಮತ್ತು ಬೀಜಿಂಗ್​ಗೆ ಅನುಕ್ರಮವಾಗಿ ಕೇವಲ ಒಂದು ಹಾಗೂ ಎರಡು ದಿನ ನಿಗದಿಪಡಿಸಲಾಗಿರುವುದು ಅಚ್ಚರಿಯ ಸಂಗತಿಯಾಗಿದೆ.

ಅಮೆರಿಕ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಬುಧವಾರ ಅಲ್ಲಿನ ವಿದೇಶಾಂಗ ಮಂತ್ರಿ ಅಂಟೋನಿ ಬ್ಲಿಂಕೆನ್​ರೊಂದಿಗೆ ಈ ತಾರತಮ್ಯವನ್ನು ಪ್ರಸ್ತಾಪಿಸಿದ್ದಾರೆ. ವೀಸಾ ಅರ್ಜಿಗಳ ಬ್ಯಾಕ್​ಲಾಗ್​ ವಿಚಾರವನ್ನೂ ಚರ್ಚಿಸಿದ್ದಾರೆ. ಕೋವಿಡ್​ ಪರಿಸ್ಥಿತಿಯಿಂದಾಗಿ ಉದ್ಭವಿಸಿರುವ ಇಂಥ ಸನ್ನಿವೇಶದ ಬಗ್ಗೆ ತಮಗೂ ತೀವ್ರ ಖೇದವಿದೆ ಎಂದು ಬ್ಲಿಂಕೆನ್​ ಹೇಳಿದ್ದಾರೆ.

ಭಾರತದಲ್ಲಿ ಸಾಂಕ್ರಾಮಿಕತೆಯ ಅವಧಿಯಲ್ಲಿ ಅಮೆರಿಕದ ಮಿಷನ್​ ಬಹುತೇಕ ಸಮಯ ತೆರೆದಿತ್ತು. ಆದರೆ, ಕರೊನಾ ಲಾಕ್​ಡೌನ್​, ಸಾಮಾಜಿಕ ಅಂತರ ಮೊದಲಾದವು ಬ್ಯಾಕ್​ಲಾಗ್​ಗೆ ಕಾರಣ ಎಂದು ಅಮೆರಿಕ ರಾಯಭಾರ ಕಚೇರಿಯ ವಕ್ತಾರ ಕ್ರಿಸ್​ ಎಲ್ಮಸ್​ ಹೇಳಿದ್ದಾರೆ. ವಲಸೆ ಮತ್ತು ವಲಸೆಯೇತರ ವೀಸಾಗಳ ಎಲ್ಲ ವಿಧಗಳ ಅರ್ಜಿಗಳ ಪರಿಷ್ಕರಣೆ ಕೆಲಸ ಪುನರಾರಂಭವಾಗಿದೆ. ಸಕಾಲದಲ್ಲಿ ತರಗತಿಗಳಿಗೆ ಹಾಜರಾಗುವುದನ್ನು ಖಾತರಿಪಡಿಸಲು 82,000ಕ್ಕೂ ಹೆಚ್ಚು ವಿದ್ಯಾರ್ಥಿ ವೀಸಾ ನೀಡಲಾಗಿದೆ. ಇದರಿಂದಾಗಿ ಬೇರೆಲ್ಲ ದೇಶಗಳಿಗಿಂತ ಹೆಚ್ಚಾಗಿ ಭಾರತದ ಅಧಿಕ ವಿದ್ಯಾರ್ಥಿಗಳು ಅಮೆರಿಕದತ್ತ ಹೊರಟಿದ್ದಾರೆ ಎಂದು ಕ್ರಿಸ್​ ವಿವರಿಸಿದ್ದಾರೆ. ರಾಯಭಾರ ಕಚೇರಿಯ ಎಲ್ಲ ಖಾಲಿ ಹುದ್ದೆಗಳನ್ನು ತುಂಬಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.