ಚೀನಾದಲ್ಲಿ ಅದನ್ನು ಛೀ ಎನ್ನುತ್ತಾರೆ. ಪ್ರಾಣದ ಶಕ್ತಿ ಹೆಚ್ಚಾದಷ್ಟೂ ಬಹಳ ಉತ್ಸಾಹ, ಸೃಜನಶೀಲತೆಯನ್ನು ಅನುಭವಿಸುತ್ತೀರಿ. ನೆನಪಿನ ಶಕ್ತಿ ಸಹಜವಾಗಿಯೇ ಹೆಚ್ಚುತ್ತದೆ. ಓದುವುದರ ನಡುವೆ ಅಲ್ಪವಿರಾಮವನ್ನು ತೆಗೆದುಕೊಂಡು ಏನಾದರೂ ಸೃಜನಶೀಲವಾದುದನ್ನು ಮಾಡಿ. ಹಾಸ್ಯಪ್ರಜ್ಞೆಯನ್ನು ಮೂಡಿಸಿಕೊಳ್ಳಿ. ಪ್ರಾಣದ ಶಕ್ತಿ ಕಡಿಮೆಯಾದಾಗ ಖಿನ್ನತೆ, ಭಯ ಇವೆಲ್ಲವೂ ಹೆಚ್ಚುತ್ತದೆ. ಯಾರಾದರೂ ನಿಮ್ಮ ಓದಿನ ಬಗ್ಗೆ ಟೀಕಿಸಿದರೆ, ಅದನ್ನು ತೆಗೆದುಕೊಳ್ಳುವ ಸಾಮರ್ಥ್ಯ ನಿಮ್ಮಲ್ಲಿ ಇರಬೇಕು. ನಿಮ್ಮ ಮೇಲಿರುವ ಅಕ್ಕರೆ , ಕಾಳಜಿಯಿಂದಾಗಿ, ನಿಮ್ಮ ತಪ್ಪನ್ನು ಸರಿಪಡಿಸಿಕೊಂಡು ಉತ್ತಮವಾದ ರೀತಿಯಲ್ಲಿ ಮುನ್ನಡೆಯಬೇಕೆಂದು ಹಾಗೆ ಹೇಳುತ್ತಿರುತ್ತಾರೆ. ನಿಮ್ಮ ತಂದೆತಾಯಿ ಅಥವಾ ಶಿಕ್ಷಕರು ನಿಮ್ಮ ಒಳ್ಳೆಯದಕ್ಕಾಗಿ ನಿಮ್ಮನ್ನು ಬೈಯದೇ ಇದ್ದರೆ, ಭವಿಷ್ಯದಲ್ಲಿ ಜಗತ್ತನ್ನು ನೀವೇ ಸ್ವತಂತ್ರವಾಗಿ ಎದುರಿಸಬೇಕಾಗಿ ಬಂದಾಗ, ಬಹಳ ಬಲಹೀನರಾಗಿಬಿಡುತ್ತೀರಿ. ಸ್ವಲ್ಪ ಒತ್ತಡವಿದ್ದಾಗ ಸಮಯಕ್ಕೆ ಸರಿಯಾಗಿ, ಬದ್ಧತೆಯಿಂದ ಓದಿ ಮುಗಿಸುತ್ತೀರಿ.
ನೀವು ಪರೀಕ್ಷೆ ಬರೆಯುತ್ತಿರುವುದು ಇದೇನೂ ಮೊದಲ ಸಲವಲ್ಲ. ಕಳೆದ ವರ್ಷವೂ ಪರೀಕ್ಷೆಯನ್ನು ಬರೆದಿದ್ದೀರಿ. ಆಗಾಗ ಅನೇಕ ಪರೀಕ್ಷೆಗಳನ್ನು ಮೊದಲ ತರಗತಿಯಿಂದಲೇ ಬರೆಯುತ್ತ ಬಂದಿರುವಿರಿ. ಒಂದು ವೇಳೆ ಹಳೆಯ ಪರೀಕ್ಷೆಗಳಲ್ಲಿ ಚೆನ್ನಾಗಿ ಬರೆಯದಿದ್ದರೆ, ಈಗ ಬರೆಯುವ ಪರೀಕ್ಷೆಯ ಮೇಲೆ ಸ್ವಲ್ಪ ಹೆಚ್ಚು ಗಮನ ಕೊಡಿ. ನೀವು ಚೆನ್ನಾಗಿ ಮಾಡಬಲ್ಲಿರಿ ಎಂಬ ವಿಶ್ವಾಸವನ್ನೂ ಹೊಂದಿ. ಒಂದು ವೇಳೆ ನೀವು ಶ್ರಮಪಟ್ಟು ಓದಿದರೂ ನೀವು ನಿರೀಕ್ಷಿಸಿದಷ್ಟು ಅಂಕಿಗಳು ಬರದಿದ್ದರೆ, ಅದಕ್ಕಾಗಿ ಎದೆಗುಂದಬೇಡಿ. ಪರೀಕ್ಷೆಯಲ್ಲಿ ಎಷ್ಟು ಸಲ ಪ್ರಯತ್ನಿಸಿದರೂ ಸಫಲವಾಗದೆ, ಕಂಗೆಟ್ಟಿರುವ ವಿದ್ಯಾರ್ಥಿಗಳೇ, ನೋಡಿ, ಆಶೆಯನ್ನಂತೂ ತೊರೆಯುವುದು ಬೇಡ. ಫಲಿತಾಂಶ ಬಂದಿತು. ಅದರಲ್ಲಿ ತಲೆ ಹೋಗುವಂಥದ್ದೇನಿದೆ?
ಎಷ್ಟೋ ಜನರು ಎಲ್ಲಾ ಕಡೆಗಳಲ್ಲೂ ಸೋಲನ್ನು ಅನುಭವಿಸಿದ ನಂತರ ಗೆಲುವನ್ನು ಪಡೆದ ಅನೇಕ ಕಥೆಗಳಿವೆ. ಕೆಲಸ ಸಿಗದೆ ಅಲೆದಾಡಿ, ಅಲೆದಾಡಿ, ತಟ್ಟಿದ ಯಾವ ಬಾಗಿಲೂ ತೆರೆಯದೆ ಇದ್ದಂತಹ ಪರಿಸ್ಥಿತಿಯನ್ನು ಎದುರಿಸಿ, ಈಗ ಅವರೇ ಸ್ವತಃ ಲಕ್ಷಾಂತರ ಜನರಿಗೆ ಕೆಲಸ ಕೊಡುವಂತಹ ಪರಿಸ್ಥಿತಿಗೂ ತಲುಪಿದ್ದಾರೆ. ಆದ್ದರಿಂದ, ಆ ಸೋಲನ್ನು ಅಷ್ಟೊಂದು ಹೃದಯಕ್ಕೆ ತೆಗೆದುಕೊಳ್ಳಬೇಕಿಲ್ಲ. ಸೋತರೆ ಏನಂತೆ? ಮುನ್ನುಗ್ಗಿ. ಉಜ್ವಲವಾದ ಭವಿಷ್ಯ ನಿಮ್ಮದು ಎಂಬ ಭರವಸೆಯನ್ನು ಇಟ್ಟುಕೊಂಡು ಮುನ್ನಡೆಯಬೇಕು.
ಸ್ವಲ್ಪ ಸತ್ಸಂಗ ಮಾಡಿದರೂ ಸಹ ನಿಮಗೆ ಉಜ್ವಲವಾದ ಭವಿಷ್ಯ ನಿಶ್ಚಯವಾಗಿದೆ ಎಂದು ಹೇಳಬಹುದು. ಕೃಷ್ಣನು ಭಗವದ್ಗೀತೆಯಲ್ಲಿ, ‘ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್’... ಸ್ವಲ್ಪವಾದರೂ ನೀನು ಈ ಧರ್ಮವನ್ನು ಪಾಲಿಸಿದರೂ ಸಾಕು, ಎಲ್ಲಾ ಭಯಗಳಿಂದಲೂ ನೀನು ಮುಕ್ತನಾಗುತ್ತೀಯ ಎನ್ನುತ್ತಾನೆ. ಗೊತ್ತಾಯಿತಲ್ಲವೆ?
| (ಲೇಖಕರು ಆಧ್ಯಾತ್ಮಿಕ ಚಿಂತಕರು, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರು)