ಕೆ ಆರ್ ನಗರ: ಕಾಡಿನ ನಾಶ, ಜಲಮಾಲಿನ್ಯ, ಅತಿಯಾದ ಪ್ಲಾಸ್ಟಿಕ್ ಬಳಕೆ, ಹವಾಮಾನ ವೈಪರೀತ್ಯ ಮುಂತಾದವುಗಳ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳು ಪರಿಸರವನ್ನು ಉಳಿಸಿ, ಬೆಳೆಸುವ ಮಹತ್ವವನ್ನು ಅರಿಯಬೇಕು ಎಂದು ಲಯನ್ಸ್ ಪ್ರೌಢಶಾಲೆಯ ಆಂಗ್ಲ ಮಾಧ್ಯಮ ಮುಖ್ಯಶಿಕ್ಷಕ ಎಲ್.ಎಸ್.ಲೋಕೇಶ್ ಹೇಳಿದರು.
ಪಟ್ಟಣದ ಲಯನ್ಸ್ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ಶಾಲಾ ಆವರಣದಲ್ಲಿ ಗಿಡ ನೆಟ್ಟು ಮಾತನಾಡಿದ ಅವರು, ಪ್ರಸ್ತುತ ಪರಿಸರ ಉಳಿಸುವುದು ಬಹಳ ಅವಶ್ಯವಾಗಿರುವ ಕಾರಣ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಅದರಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ ಬಹಳ ಅರ್ಥಪೂರ್ಣವಾಗಿ ಪರಿಸರ ದಿನವನ್ನು ಆಚರಿಸುವ ಮೂಲಕ ಪರಿಸರ ಉಳಿಸಿ, ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ದೈಹಿಕವಾಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿ ಕಾಪಾಡುವ ಪ್ರಯತ್ನ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕಾಗಿದೆ ಎಂದರು.
ನಾವೆಲ್ಲರೂ ದಿನನಿತ್ಯದ ಒತ್ತಡದಲ್ಲಿ ಸಿಲುಕಿಕೊಂಡು ಜೀವನ ನಡೆಸುತ್ತಿದ್ದೇವೆ. ಪರಿಸರ ಉಳಿಸುವ ಪ್ರಯತ್ನಗಳ ನಡುವೆಯೂ ನಮ್ಮ ಅರಿವಿಗೆ ಬಾರದಂತೆ ಪರಿಸರಕ್ಕೆ ಹಾನಿಯಾಗುವಂತಹ ಕೆಲಸಗಳನ್ನು ಮಾಡುತ್ತಿದ್ದೇವೆ. ಇದರಿಂದಾಗಿ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಆಧುನಿಕತೆ ಇಲ್ಲದಿದ್ದರೂ ನಮ್ಮ ಪೂರ್ವಿಕರು ಉತ್ತಮ ಆಹಾರ ಸೇವನೆ ಮಾಡುತ್ತಾ ಆರೋಗ್ಯವಂತರಾಗಿದ್ದರು. ನಮ್ಮ ಆರೋಗ್ಯವು ಒಂದು ಪರಿಸರವಾಗಿದ್ದು ಯಾವುದೇ ಕಾಯಿಲೆಗೆ ತುತ್ತಾಗದೆ ಔಷಧ ಬಳಸದೆ ಬದುಕಬೇಕಾದರೆ ಪರಿಸರ ಉತ್ತಮವಾಗಿರಬೇಕು. ಆಗ ನಮ್ಮ ಆರೋಗ್ಯವು ಉತ್ತಮವಾಗಲಿದೆ. ಈ ನಿಟ್ಟಿನಲ್ಲಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಣಲು ವಿದ್ಯಾರ್ಥಿಗಳು ತಮ್ಮ ಮನೆಯ ಆವರಣದಲ್ಲಿ ಅಥವಾ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ವಿ ಪೋಷಣೆ ಮಾಡಬೇಕೆಂದು ಕಿವಿಮಾತು ಹೇಳಿದರು.
ವಿಜ್ಞಾನ ಶಿಕ್ಷಕ ಯೋಗೇಶ್, ಸಹ ಶಿಕ್ಷಕರಾದ ಎಂ.ಕೆ.ರುಕ್ಮಿಣಿ, ಸೌಮ್ಯಾ, ವನಜಾಕ್ಷಿ, ಎಸ್.ಅಶ್ವಿನಿ, ಬಿ.ಎಸ್.ಹರೀಶ್, ಎಂ.ಎಲ್.ಅರುಣ್, ಸಿ.ಎಂ.ಪುಷ್ಪಾವತಿ, ಎಸ್.ಯೋಗಾನಂದ್, ದೈಹಿಕ ಶಿಕ್ಷಣ ಶಿಕ್ಷಕ ಟಿ.ಪಿ.ಸುರೇಂದ್ರ, ಲೆಕ್ಕಾಧಿಕಾರಿಗಳಾದ ಕೆ.ಆರ್.ವಿನುತಾ, ಬಿ.ಬಿ.ಜಾನ್ ಹಾಜರಿದ್ದರು.